×
Ad

'ಇದೇನಾ ನಿಮ್ಮ ಬೇಟಿ ಬಚಾವೋ?'

Update: 2019-10-25 18:12 IST

ಹೊಸದಿಲ್ಲಿ, ಅ.25: ಹರ್ಯಾಣದಲ್ಲಿ ಸರಕಾರ ರಚಿಸಲು ಬಹುಮತದ ಕೊರತೆಯೆದುರಿಸುತ್ತಿರುವ ಬಿಜೆಪಿಗೆ ಬೆಂಬಲ ಸೂಚಿಸಿರುವ ವಿವಾದಿತ ಶಾಸಕ ಗೋಪಾಲ್ ಕಾಂಡ ಮತ್ತೆ ಸುದ್ದಿಯಲ್ಲಿದ್ದಾರೆ. ಏಳು ವರ್ಷಗಳ ಹಿಂದೆ ಅವರ ಒಡೆತನದ (ಈಗ ಮುಚ್ಚಿರುವ) ಎಂಡಿಎಲ್‍ಆರ್ ವಿಮಾನಯಾನ ಸಂಸ್ಥೆಯಲ್ಲಿ ಗಗನಸಖಿಯಾಗಿದ್ದ ಗೀತಿಕಾ ಶರ್ಮ ಆತ್ಮಹತ್ಯೆ ಪ್ರಕರಣದಲ್ಲಿ ಗೋಪಾಲ್ ಕಾಂಡ ವಿಚಾರಣೆ ಎದುರಿಸುತ್ತಿದ್ದಾರೆ. ಘಟನೆಯ ನಂತರ ಗೀತಿಕಾ ತಾಯಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು.

ಇದೀಗ ಪ್ರಭಾವಿ ಉದ್ಯಮಿ, ರಾಜಕಾರಣಿಯಾಗಿರುವ ಗೋಪಾಲ್ ಕಾಂಡ ವಿರುದ್ಧ  ಗೀತಿಕಾ ಸೋದರ ಅಂಕಿತ್ ಶರ್ಮ ಕಿಡಿ ಕಾರಿದ್ದಾರೆ. "ಹರ್ಯಾಣಾದಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಘೋಷಣೆ ಏನಾಯಿತು?, ಕೆಲವರನ್ನು ಸಾವಿನತ್ತ ದೂಡಿದ ಒಬ್ಬ ಗೂಂಡಾಗೆ ನಾವು ಮಹಿಳೆಯರ ಜವಾಬ್ದಾರಿ ನೀಡುವುದೇ?'' ಎಂದು ಅವರು ಪ್ರಶ್ನಿಸಿದ್ದಾರೆ.

ಗೀತಿಕಾ ಶರ್ಮ ಆತ್ಮಹತ್ಯೆ ಪ್ರಕರಣ ನಂತರ ಆಗಿನ ಭೂಪೀಂದರ್ ಸಿಂಗ್ ಹೂಡಾ ಸರಕಾರದಲ್ಲಿ ಸಚಿವನಾಗಿದ್ದ ಕಾಂಡ ನಂತರ ರಾಜೀನಾಮೆ ನೀಡಿದ್ದರು. ಗೀತಿಕಾ ಆತ್ಮಹತ್ಯೆಗೆ ಪ್ರೇರೇಪಿಸಿದ ಆರೋಪ ಅವರ ಮೇಲಿತ್ತು. ಆತ ಕಿರುಕುಳ ನೀಡಿದ್ದರೆಂದು ಗೀತಿಕಾ ಬರೆದಿದ್ದ ಸುಸೈಡ್ ನೋಟ್ ಪತ್ತೆಯಾದ ನಂತರ ಕಾಂಡ ಬಂಧನವಾಗಿತ್ತು. ಆಗ ಬಿಜೆಪಿ ಇವರ ವಿರುದ್ಧ ಪ್ರತಿಭಟನೆಯನ್ನೂ ನಡೆಸಿತ್ತು.

ಕಾಂಡಾ ವಿರುದ್ಧ ಅತ್ಯಾಚಾರ, ಆತ್ಮಹತ್ಯೆಗೆ ಪ್ರೇರೇಪಣೆ, ಕ್ರಿಮಿನಲ್ ಸಂಚು ಹಾಗೂ ಕ್ರಿಮಿನಲ್ ಬೆದರಿಕೆ ಒಡ್ಡಿದ ಪ್ರಕರಣ ದಾಖಲಾಗಿತ್ತು ಹಾಗೂ ಒಂದು ವರ್ಷ ಜೈಲಿನಲ್ಲಿದ್ದ ಆತನ ವಿರುದ್ಧದ ಅತ್ಯಾಚಾರ ಪ್ರಕರಣ 2014ರಲ್ಲಿ ಕೈಬಿಡಲಾಗಿತ್ತು. ನಂತರ ಕಾಂಡ ಜಾಮೀನಿನ ಮೇಲೆ ಬಿಡುಗಡೆಯಾದ ವರ್ಷವೇ ಹರ್ಯಾಣ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News