‘ಕ್ಯಾರ್’ ಚಂಡಮಾರುತಕ್ಕೆ ನಲುಗಿದ ದ.ಕ. ಜಿಲ್ಲೆ
ಮಂಗಳೂರು, ಅ.25: ಅರಬ್ಬಿ ಸಮುದ್ರ ಮತ್ತು ಲಕ್ಷ ದ್ವೀಪದಲ್ಲಿ ವಾಯುಭಾರ ಕುಸಿತದಿಂದ ‘ಕ್ಯಾರ್’ ಚಂಡಮಾರುತ ಆರ್ಭಟಿಸುತ್ತಿದೆ. ಶುಕ್ರವಾರ ದ.ಕ. ಜಿಲ್ಲಾದ್ಯಂತ ವ್ಯಾಪಕ ಮಳೆಯಾಗಿದೆ. ಜಿಲ್ಲಾಧಿಕಾರಿಯು ಶುಕ್ರವಾರ ದ.ಕ. ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದರು. ಹಾಗಾಗಿ ಬಹುತೇಕ ಶಾಲಾ-ಕಾಲೇಜುಗಳು ರಜೆ ಘೋಷಿಸಿದ್ದವು. ನಿರಂತರವಾಗಿ ಸುರಿದ ಮಳೆಗೆ ಜಿಲ್ಲೆಯ ವಿವಿಧೆಡೆ ಅಪಾರ ಆಸ್ತಿ-ಪಾಸ್ತಿ ಹಾನಿ ಸಂಭವಿಸಿದೆ.
ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಹೆಂಚಿನ ಮನೆ ಸಂಪೂರ್ಣ ಧರಾಶಾಹಿಯಾಗಿದೆ. ಘಟನೆಯಲ್ಲಿ ಹೆಂಚುಗಳು ಪುಡಿಗಟ್ಟಿವೆ. ಮನೆ ಸಂಪೂರ್ಣ ಜಖಂಗೊಂಡಿದ್ದು, ವಾರಸುದಾರರು ಕಣ್ಣೀರಿಡುತ್ತಿದ್ದಾರೆ. ಸಮುದ್ರವು ಪ್ರಕ್ಷುಬ್ಧಗೊಂಡಿದ್ದು, ಅಲೆಗಳ ಅಬ್ಬರದಿಂದ ಸಸಿಹಿತ್ಲು ಬೀಚ್ ಸಮೀಪದ ಮರಗಳು ಬುಡಮೇಲಾಗಿವೆ. ಘಟನೆಯಲ್ಲಿ ಸುಮಾರು 10 ಹೆಚ್ಚು ಮರಗಳು ಧರಾಶಾಹಿಯಾಗಿವೆ.
ವಿಟ್ಲದಲ್ಲಿ ಸುರಿದ ಮಳೆಗೆ ಮರವೊಂದು ಮನೆ ಮೇಲೆ ಬಿದ್ದು ಭಾಗಶಃ ಹಾನಿಯಾಗಿದೆ. ಮೂಡುಬಿದಿರೆ ಸಮೀಪದ ಪ್ರಾಂತ್ಯ ಎಂಬಲ್ಲೂ ಮನೆ ಮೇಲೆ ಗಿಡ ಉರುಳಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಬೆಳ್ತಂಗಡಿ ಹಾಗೂ ಪುತ್ತೂರು ತಾಲೂಕಿನ ಕೆಲವೆಡೆ ಭಾರಿ ಮಳೆಯೂ ಆಗಿದೆ.
ಮನೆಗೆ ನುಗ್ಗಿದ ಮಳೆನೀರು: ಮಂಗಳೂರು ನಗರದ ಮಾಕಾಳಿಪಡು ಜೆಪ್ಪು ಪ್ರದೇಶದ ಹಲವು ಮನೆಗಳು ಸೇರಿದಂತೆ ಸಮೀಪದ ದೈವಸ್ಥಾನಕ್ಕೂ ಮಳೆನೀರು ನುಗ್ಗಿದೆ. ಸಲೀಮ್, ನಝೀರ್, ಇರ್ಷಾದ್ ಎಂಬವರು ಮನೆಗಳು ಜಲಾವೃತಗೊಂಡಿವೆ. ಸುರೇಶ್ ಮತ್ತು ಸುನೀಲ್ ಎಂಬವರ ಮನೆಯ ಗೋಡೆಗಳು ಧರಾಶಾಹಿಯಾಗಿವೆ. ಗೃಹೋಪಯೋಗಿ ವಸ್ತುಗಳು ಹಾಳಾಗಿವೆ. ಮಾರ್ನಗೇಟ್, ಆದರ್ಶನಗರದ ಮಳೆನೀರು ಮಾಕಾಳಿಪಡು ಜೆಪ್ಪು ಪ್ರದೇಶದತ್ತ ನುಗ್ಗಿದ್ದರಿಂದಲೇ ಮನೆಗಳು ಜಲಾವೃತಗೊಳ್ಳಲು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ನಿರಂತರವಾಗಿ ಸುರಿದ ಮಳೆಗೆ ಮಂಗಳೂರು ನಗರದ ಬೋಳಾರದಲ್ಲಿ ರಸ್ತೆ ಕುಸಿತ ಉಂಟಾಗಿ ಶತಮಾನದ ಬಾವಿ ಪ್ರತ್ಯಕ್ಷವಾಗಿದೆ. ಘಟನೆ ನಡೆದಿದೆ. ನಗರದ ರುವ ಲೀವೆಲ್ ಸರ್ಕಲ್‌ನಲ್ಲಿ ಈ ಘಟನೆ ನಡೆದಿದೆ. ತೊಕ್ಕೊಟ್ಟು ಕಲ್ಲಾಪು ಎಂಬಲ್ಲಿ ವಿದ್ಯುತ್ ಸ್ವಿಚ್ ಬೋರ್ಡ್ ದುರಸ್ತಿ ವೇಳೆ ಯುವಕನೋರ್ವ ಮೃತಪಟ್ಟ ಘಟನೆಗಳೂ ವರದಿಯಾಗಿವೆ.
ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಉಳ್ಳಾಲದಲ್ಲಿ ಸಮುದ್ರದ ಅಲೆಗಳು ದಡಕ್ಕೆ ಬಿರುಸಿನಿಂದ ಅಪ್ಪಳಿಸುತ್ತಿದ್ದು, ಕೈಕೋ, ಕಿಲೇರಿಯಾನಗರ, ಮೊಗವೀರಪಟ್ನ ಸಮುದ್ರ ತೀರದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.
ಮೀನುಗಾರರಿಗೆ ಎಚ್ಚರಿಕೆ: ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಕರಾವಳಿ ನಿರಂತರ ಮಳೆ ಸುರಿಯುತ್ತಿದೆ. ಮೀನುಗಾರರಿಗೆ ಮುಂದಿನ ಎರಡು ದಿನಗಳವರೆಗೆ ಕಡ್ಡಾಯವಾಗಿ ಮೀನುಗಾರರು ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.
80 ಕಿ.ಮೀ. ವೇಗದ ಅಲೆಗಳು
ಕಳೆದ ನಾಲ್ಕೈದು ದಿನಗಳಿಂದ ಕರಾವಳಿಯಲ್ಲಿ ಬಿಡುವಿಲ್ಲದೆ ಸುರಿಯುತ್ತಿರುವ ಮಳೆಯಿಂದಾಗಿ ಭಾರೀ ಪ್ರಮಾಣದಲ್ಲಿ ನೆಲಹಸಿಯಾಗಿದೆ. ಅ.26ರವರೆಗೂ ‘ರೆಡ್ ಅಲರ್ಟ್’ ಮುಂದುವರಿದಿದೆ. ಚಂಡಮಾರುತದಿಂದಾಗಿ ಅರಬ್ಬಿ ಸಮುದ್ರದಲ್ಲಿ ಭಾರೀ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. 3.5ರಿಂದ 5 ಮೀಟರ್ ಎತ್ತರದವರೆಗೆ ಅಲೆಗಳ ಆರ್ಭಟಿಸುತ್ತಿವೆ. ಇದೇ ಪರಿಸ್ಥಿತಿ ಅ.27ರವರೆಗೂ ವಿಸ್ತರಿಸುವ ಸಾಧ್ಯತೆ ಇದೆ. ರಾಜ್ಯದ ಕರಾವಳಿ ಪ್ರದೇಶದಲ್ಲಿ ಸಮುದ್ರದ ಅಲೆಗಳು ಗಂಟೆಗೆ 45ರಿಂದ 55 ಕಿ.ಮೀ. ವೇಗದಲ್ಲಿ ಬೀಸುತ್ತಿವೆ.
ಅ.26ರಂದು ಚಂಡಮಾರುತದ ಪರಿಣಾಮ ಮುಂದುವರಿಯಲಿದ್ದು, ಮಳೆಯ ಜತೆ ಭಾರೀ ಬಿರುಗಾಳಿ ಬೀಸಲಿದೆ. ಆಗ ಅಲೆಗಳ ವೇಗವು ಗಂಟೆಗೆ 80 ಕಿ.ಮೀ.ವರೆಗೂ ಇರಲಿದೆ. ಅ.27 ಮತ್ತು 28ರವರೆಗೂ ಕಡಲಲ್ಲಿ ಬಿಗುವಿನ ವಾತಾವರಣ ಇರಲಿದೆ.
ತುರ್ತು ಸೇವೆ: ಮಳೆಯಿಂದಾದ ಯಾವುದೇ ಸಮಸ್ಯೆಗಳಿಗೆ ತುರ್ತು ಸೇವೆ 24 ಗಂಟೆಯೂ ಲಭ್ಯವಿದೆ. 1077 ಅಥವಾ ವಾಟ್ಸ್‌ಆ್ಯಪ್ ಸಂಖ್ಯೆ 9483908000ನ್ನು ಸಂಪರ್ಕಿಸಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ.
ರಕ್ಷಣಾ ಪಡೆಯ ನೌಕೆಗೆ ಅಡಚಣೆ
ಅರಬ್ಬಿ ಸಮುದ್ರದಲ್ಲಿ ಕಡಲು ಪ್ರಕ್ಷುಬ್ಧಗೊಂಡಿದ್ದು, ದ.ಕ. ಜಿಲ್ಲೆಯಲ್ಲಿ ಭಾರೀ ಮಳೆಯಾಗಿದೆ. ಮಳೆಯ ಕಾರಣ ಭಾರೀ ಸಂಖ್ಯೆಯ ಮೀನುಗಾರಿಕಾ ಬೋಟುಗಳು ಲಂಗರು ಹಾಕಿವೆ. ಇದರಿಂದ ಕರಾವಳಿ ರಕ್ಷಣಾ ಪಡೆಯ ನೌಕೆಗೆ ಕಾರ್ಯಾಚರಣೆ ನಡೆಸಲು ಅಡಚಣೆಯಾಗಿದೆ.
ಬಂದರು ಪ್ರವೇಶಿಸುವ ಭಾಗದಲ್ಲಿಯೇ ಸುಮಾರು 200ಕ್ಕೂ ಅಧಿಕ ಬೋಟುಗಳು ಲಂಗರು ಹಾಕಿವೆ. ಸಮುದ್ರದಲ್ಲಿ ಪರಿಹಾರ ಮತ್ತು ಹುಡುಕಾಟ ಕಾರ್ಯಾಚರಣೆ ನಡೆಸಲು ಕರಾವಳಿ ರಕ್ಷಣಾ ಪಡೆಯ ನೌಕೆಗೆ ಸಂಕಷ್ಟ ಬಂದಿದೆ.
ಮಳೆಗೆ ಶತಮಾನದ ಬಾವಿ ಪ್ರತ್ಯಕ್ಷ
ಮಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ರಸ್ತೆ ಕುಸಿತ ಆಗಿ ಶತಮಾನದ ಹಿಂದಿನ ಬಾವಿ ಪ್ರತ್ಯಕ್ಷವಾದ ಘಟನೆ ನಡೆದಿದೆ. ನಗರದ ಬೋಳಾರ ದಲ್ಲಿರುವ ಲೀವೆಲ್ ಸರ್ಕಲ್‌ನಲ್ಲಿ ಈ ಘಟನೆ ನಡೆದಿದೆ.
ದಶಕಗಳ ಹಿಂದೆ ಇಲ್ಲಿ ಬಾವಿಯನ್ನು ಮುಚ್ಚಲಾಗಿತ್ತು. ಅದರ ಮೇಲೆ ಇದ್ದ ರಸ್ತೆ ನಿನ್ನೆ ಕುಸಿದು ಈ ಬಾವಿ ಪ್ರತ್ಯಕ್ಷವಾಗಿದೆ. ಈ ಬಾವಿ ಶತಮಾನ ಗಳ ಹಿಂದಿನದಾಗಿದ್ದು ‘ಲೀ’ ಎಂಬವರು ಇದನ್ನು ನಿರ್ಮಿಸಿದ್ದರು. ಆ ಕಾರಣಕ್ಕಾಗಿ ಆ ಪ್ರದೇಶಕ್ಕೆ ‘ಲೀವೆಲ್’ ಎಂದು ಹೆಸರು ಬಂದಿತ್ತು.
ಬಾವಿ ಬಾಯ್ದೆರೆದ ಕಾರಣ ಸಂಚಾರಕ್ಕೆ ತೊಡಕುಂಟಾಗುವುದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರ ಗಮನ ಸೆಳೆದಿದ್ದು, ಅದರಂತೆ ಸಂಚಾರ ಪೊಲೀಸರು ಬ್ಯಾರಿಕೇಡ್ ಅಡ್ಡವಿಟ್ಟು ಸುಗಮ ಸಂಚಾರಕ್ಕೆ ಅವಕಾಶ ಮಾಡಿದ್ದಾರೆ.
ಇಲ್ಲಿ ರಸ್ತೆ ನಿರ್ಮಿಸುವಾಗ ಬಾವಿಗೆ ಮಣ್ಣು ತುಂಬಿಸದೆ ಮೇಲೆ ಕಲ್ಲು ಚಪ್ಪಡಿ ಹಾಕಿ ಮಣ್ಣು ತುಂಬಿಸಿ ಡಾಂಬರೀಕರಣ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ಕಳೆದ ಮೂರ್ನಾಲ್ಕು ದಿನದಿಂದ ಸುರಿಯುತ್ತಿರುವ ಭಾರೀ ಮಳೆಗೆ ಮಣ್ಣು ಸಡಿಲಗೊಂಡು ಬಾವಿಯು ಬಾಯ್ದೆರೆದಿದೆ. ಅಲ್ಲದೆ, ಎರಡು ಅಡಿ ಅಗಲದ ಸುತ್ತಳತೆಯಲ್ಲಿ ಡಾಂಬರು ರಸ್ತೆ ಕುಸಿತ ಕಂಡಿದೆ.
ಐವನ್ ಪರಿಶೀಲನೆ: ಮಂಗಳೂರು ನಗರದ ಬೋಳಾರದ ಬಸ್ ತಂಗುದಾಣ ಸಮೀಪದ ಶತಮಾನದ ಹಿಂದಿನ ಬಾವಿಯು ಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಭೇಟಿ ನೀಡಿ ಪರಿಶೀಲನೆ ನಡೆಸಿದರು.