ಗೋವಾ ಬಳಿ ಮಲ್ಪೆ ಬೋಟು ಮುಳುಗಡೆ: ಆರು ಮೀನುಗಾರರ ರಕ್ಷಣೆ
ಮಲ್ಪೆ, ಅ. 25: ಭಾರೀ ಗಾಳಿಯ ಪರಿಣಾಮ ಅ.24ರಂದು ಸಂಜೆ ವೇಳೆ ಗೋವಾ ಸಮುದ್ರದ ಮಧ್ಯೆ ಮೀನುಗಾರಿಕೆ ನಡೆಸುತ್ತಿದ್ದ ಮಲ್ಪೆಯಿಂದ ಹೊರಟ ಬೋಟು ಮುಳುಗಿದ್ದು, ಇದರಲ್ಲಿದ್ದ ಆರು ಮಂದಿ ಮೀನುಗಾರರನ್ನು ಇತರ ಬೋಟಿನವರು ರಕ್ಷಿಸಿರುವ ಬಗ್ಗೆ ವರದಿಯಾಗಿದೆ.
ಕಟಪಾಡಿ ಮಣಿಪುರದ ಭಾಸ್ಕರ ಮೆಂಡನ್ ಎಂಬವರ ರಾಮರಕ್ಷ ಎಂಬ ಹೆಸರಿನ ಮೀನುಗಾರಿಕಾ ಬೋಟು ಅ.15ರಂದು ರಾತ್ರಿ 10ಗಂಟೆಗೆ ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಗೋವಾ ವಾಸ್ಕೋ ಸಮುದ್ರದ ಮಧ್ಯೆ ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭ ಅ.24ರಂದು ಗಾಳಿಯ ರಭಸಕ್ಕೆ ಬೋಟಿನ ಇಂಜಿನ್ ಹಾಳಾಗಿ, ಬೋಟು ಸಮುದ್ರ ಮಧ್ಯದಲ್ಲೇ ನಿಂತಿತು ಎನ್ನಲಾಗಿದೆ.
ಬೋಟಿನ ತಾಂಡೇಲ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬುದಾಗಿ ಭಾಸ್ಕರ ಮೆಂಡನ್ ಮಲ್ಪೆ ಕರಾವಳಿ ಕಾವಲು ಪಡೆಗೆ ದೂರು ನೀಡಿದ್ದು, ಅದರಂತೆ ಅವರು ಮಂಗಳೂರಿನ ಕೋಸ್ಟ್ ಗಾರ್ಡ್ ಮಾಹಿತಿ ನೀಡಿದ್ದಾರೆ. ಈ ಮಧ್ಯೆ ಅಲ್ಲೇ ಸಮೀಪದಲ್ಲಿದ್ದ ಬೋಟಿನವರು ಮುಳುಗುತ್ತಿದ್ದ ಬೋಟಿನಲ್ಲಿದ್ದ ಮೂವರು ಭಟ್ಕಳದ ಹಾಗೂ ಮೂವರು ಮಲ್ಪೆಯ ಮೀನುಗಾರರನ್ನು ರಕ್ಷಿಸಿ ತೀರಕ್ಕೆ ಕರೆ ತಂದಿದ್ದಾರೆ. ಬೋಟು ಸಂಪೂರ್ಣ ಮುಳುಗಿದ್ದು, ಸುಮಾರು 48 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.