ದಡ ಸೇರಿದ ಬೋಟುಗಳು: ಪಡುಕರೆ ಬೀಚ್‌ನಲ್ಲಿ ಕಡಲ್ಕೊರೆತ
ಉಡುಪಿ, ಅ.25: ವಾಯುಭಾರ ಕುಸಿತದಿಂದ ಸಮುದ್ರ ಪ್ರಕ್ಷುಬ್ದಗೊಂಡ ಹಿನ್ನೆಲೆಯಲ್ಲಿ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಬೋಟುಗಳು ಈಗಾಗಲೇ ದಡ ಸೇರಿವೆ. ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ಮಲ್ಪೆಯ ಬಹುತೇಕ ಬೋಟುಗಳು ಕಾರವಾರ ಬಂದರನ್ನು ಆಶ್ರಯಿಸಿವೆ.
ಸಮುದ್ರದಲ್ಲಿ ಭಾರೀ ಗಾಳಿ ಬೀಸುತ್ತಿರುವುದರಿಂದ ಬೋಟುಗಳು ಮೊನ್ನೆ ಯಿಂದ ದಡಕ್ಕೆ ಬರಲಾರಂಭಿಸಿವೆ. ಈಗಾಗಲೇ ಶೇ.90ರಷ್ಟು ಬೋಟುಗಳು ದಡಕ್ಕೆ ಬಂದಿವೆ ಎಂಬ ಮಾಹಿತಿ ತಿಳಿದುಬಂದಿದೆ. ಮಲ್ಪೆ ಬಂದರಿನಿಂದ 700-800 ಆಳ ಸಮುದ್ರ ಬೋಟು ಮತ್ತು 100-150 ಪರ್ಸಿನ್ ಬೋಟು ಗಳು ಮೀನುಗಾರಿಕೆಗೆ ತೆರಳಿದ್ದವು. ಅದೇ ರೀತಿ ಮಲ್ಪೆ ಬಂದರಿನಲ್ಲಿ ಕೇರಳ, ಗೋವಾ ಹಾಗೂ ತಮಿಳುನಾಡು ರಾಜ್ಯಗಳ ಬೋಟುಗಳು ಕೂಡ ಲಂಗರು ಹಾಕಿವೆ. ಪಡುಕೆರೆಯಲ್ಲಿ ಕಡಲ್ಕೊರೆತ: ಸಮುದ್ರ ಪ್ರಕ್ಷುಬ್ದಗೊಂಡಿರುವುದರಿಂದ ಭಾರಿ ಗ್ರಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು, ಮಲ್ಪೆ- ಪಡುಕರೆ ಬೀಚ್ ಪರಿಸರದಲ್ಲಿ ಸಮುದ್ರಕೊರೆತ ಕಾಣಿಸಿ ಕೊಂಡಿದೆ. ಇದರಿಂದ ಸುಮಾರು 80 ಮೀಟರ್‌ನಷ್ಟು ಭೂಭಾಗ ಪ್ರದೇಶ ಸಮುದ್ರ ಸೇರಿದೆ.
ಈ ವೇಳೆ ಸಮುದ್ರ ಪಾಲಾಗುತ್ತಿದ್ದ ಕಲ್ಲಿನ ಬೆಂಚುಗಳನ್ನು ಸ್ಥಳೀಯರು ಸ್ಥಳಾಂತರಿಸಿದ್ದಾರೆ. ಈಗಾಗಲೇ ಕೆಲವು ಮರಗಳು ಸಮುದ್ರ ಪಾಲಾಗಿವೆ. ಬೀಚ್‌ಗೆ ಆಗಮಿಸುವ ಪ್ರವಾಸಿಗರಿಗೆ ನೆರಳು ನೀಡುವ ಉದ್ದೇಶದಿಂದ ಅಳ ವಡಿಸಲಾದ ಕೆಲವು ಹಟ್‌ಗಳು ಸಮುದ್ರ ಪಾಲಾಗುವ ಭೀತಿಯಲ್ಲಿವೆ.
ಬೃಹತ್ ಆಕಾರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿದ್ದು, ಸಮೀಪದ ವಸಂತಿ ಸಾಲ್ಯಾನ್ ಎಂಬವರ ಮನೆಯ ಅಂಗಳದವರೆಗೂ ನೀರು ಹರಿದು ಬರುತ್ತಿದೆ. ಇದರಿಂದ ಮನೆ ಮಂದಿ ಆತಂಕದಲ್ಲಿದ್ದಾರೆ. ಮುಂಜಾನೆ ರಸ್ತೆ ದಾಟಿ ನೀರು ಬರುತ್ತಿದೆ. ಈ ಪರಿಸರದಲ್ಲಿ ಸುಮಾರು 20 ವರ್ಷಗಳ ಹಿಂದೆ ಸುನಾಮಿ ಸಂದರ್ಭದಲ್ಲಿ ನೀರು ಮೇಲೆ ಬಂದಿರುವುದು ಬಿಟ್ಟರೆ ಇದೆ ಮೊದಲು ಎಂದು ಸ್ಥಳೀಯರು ಹೇಳುತ್ತಾರೆ.
ಶುಕ್ರವಾರ ಮುಂಜಾನೆ 5:30ರ ವೇಳೆಗೆ ಗಾಳಿ ಮಳೆಗೆ ಮಲ್ಪೆ ಮುಖ್ಯ ರಸ್ತೆಯಲ್ಲಿರುವ ಹಳೆಯ ಕಟ್ಟಡ ಒಂದರ ಮೇಲ್ಚಾವಣಿಯ ಬಹೃತ್ ಗಾತ್ರದ ಶೀಟ್ ಹಾರಿ ರಸ್ತೆಯ ಮೇಲೆ ಬಿದ್ದಿದೆ. ಕಿದಿಯೂರು ಪಡುಕರೆಯ ಶಶಿಧರ ಎಂಬವರ ಮನೆಗೆ ಶುಕ್ರವಾರ ಮುಂಜಾನೆ ಗಾಳಿಗೆ ತೆಂಗಿನ ಮರ ಬಿದ್ದು ಸಂಪೂರ್ಣ ಹಾನಿಯಾಗಿ ಅಪಾರ ನಷ್ಟ ಉಂಟಾಗಿದೆ.
ಇದೇ ಗ್ರಾಮದ ಸದಾನಂದ ಮೈಂದನ್ ಎಂಬವರ ಮನೆಗೆ ಮರದ ಬಿದ್ದ ಭಾಗಃಶ 27000 ರೂ. ನಷ್ಟವಾಗಿದೆ. ಅಂಬಲಪಾಡಿ ಗ್ರಾಮದ ಬಬ್ಬುಸ್ವಾಮಿ ದೈವಸ್ಥಾನಾ ಸುಂಗಂಧಿ ಎಂಬವರ ಮನೆಯ ಮೇಲೆ ಮರಬಿದ್ದು 25000 ರೂ. ನಷ್ಟ ಉಂಟಾಗಿದೆ. ಗ್ರಾಮ ಲೆಕ್ಕಿಗ ಕುಪ್ಪಯ್ಯ, ಗ್ರಾ.ಪಂ.ಅಧ್ಯಕ್ಷ ಪ್ರಮೋದ್ ಸಾಲ್ಯಾನ್ ಸ್ಥಳಕೆ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
ಪಡುಕೆರೆಯ ಬೋಟು ಮುಳುಗಡೆ
ಸಮುದ್ರದಲ್ಲಿ ಬೀಸುತ್ತಿರುವ ಭಾರೀ ಗಾಳಿಯ ಪರಿಣಾಮ ಮಲ್ಪೆಯಿಂದ ಹೊರಟ ಮೀನುಗಾರಿಕಾ ಬೋಟೊಂದು ಗೋವಾದಿಂದ 60-65 ಮೀಟರ್ ಆಳದ ಸಮುದ್ರದಲ್ಲಿ ಮುಳುಗಿರುವ ಬಗ್ಗೆ ವರದಿಯಾಗಿದೆ.
ಅಲೆಗಳ ಅಬ್ಬರಕ್ಕೆ ಬೋಟಿನಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದಿದ್ದು, ಇದರಿಂದ ಸಮುದ್ರದ ನೀರು ಬೋಟಿನೊಳಗೆ ನುಗ್ಗಿತ್ತೆನ್ನಲಾಗಿದೆ. ಕೂಡಲೇ ಮಾಹಿತಿ ತಿಳಿದ ಸಮೀಪದಲ್ಲಿದ್ದ ಬೋಟಿನವರು ಮುಳುಗುತ್ತಿದ್ದ ಬೋಟಿನಲ್ಲಿದ್ದ ಆರು ಮಂದಿ ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ. ಬೋಟನ್ನು ಅಲ್ಲೇ ಬಿಟ್ಟು ಬಂದಿದ್ದು, ಅದು ಮುಳುಗಿರು ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.