ಕಣಚೂರು: ಸಂಶೋಧನಾ ಕೇಂದ್ರದ ಕಾಂಪ್ಲೆಕ್ಸ್ ಉದ್ಘಾಟನೆ
ಕೊಣಾಜೆ: ಆಸ್ಪತ್ರೆ ಆರಂಭಿಸುವುದೆಂದರೆ ಸುಲಭದ ಕೆಲಸವಲ್ಲ ಅಲ್ಲಿ ಪ್ರತಿ ಹಂತದಲ್ಲೂ ಎದುರಾಗುವ ದೊಡ್ಡ ದೊಡ್ಡ ಸಮಸ್ಯೆಗಳನ್ನು ಎದುರಿಸಿಕೊಂಡು ಸಮರ್ಥವಾಗಿ ಮುನ್ನಡೆಸುವುದು ನಿಜಕ್ಕೂ ಸವಾಲಾಗಿದ್ದು ಆ ನಿಟ್ಟಿನಲ್ಲಿ ಕಣಚೂರು ಸಂಸ್ಥೆಯ ಚೇರ್ ಮೆನ್ ಯು.ಕೆ. ಮೋನು ಅವರ ಸಾಧನೆ ಶ್ಲಾಘನೀಯ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥ್ ನಾರಾಯಣ್ ಹೇಳಿದರು.
ನಾಟೆಕಲ್ ನ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಐದು ನೂತನ ಮೊಡ್ಯುಲರ್ ಆಪರೇಷನ್ ಥಿಯೇಟರ್ ಕಾಂಪ್ಲೆಕ್ಸ್ ನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಮಹತ್ವಾಕಾಂಕ್ಷೆಯನ್ನು ಬೆನ್ನತ್ತಿ ಅದನ್ನು ಈಡೇರಿಸಿಕೊಳ್ಳುತ್ತಾ ಮಾನವೀಯ ನೆಲೆಯಲ್ಲೂ ಸಮಾಜಕ್ಕೆ ಸೇವೆ ಸಲ್ಲುಸುವ ಪ್ರಮುಖ ಗುರಿ ಹೊಂದಿರುವ ಸಂಸ್ಥೆ ಇನ್ನಷ್ಟು ಬೆಳಗಲಿ. ಸಮಾಜಕ್ಕೆ ಏನಾದರೂ ಕೊಡಬೇಕು ಎಂಬ ಸಂಸ್ಥೆಯ ಚೇರ್ ಮೆನ್ ದೂರದೃಷ್ಟಿಗೆ ಮೆಚ್ಚಬೇಕಿದೆ ಎಂದರು.
ಶಾಸಕ ಯು. ಟಿ. ಖಾದರ್ ಮಾತನಾಡಿ ಶ್ರದ್ಧಾಪೂರ್ವಕವಾಗಿ ಕಠಿಣ ಶ್ರಮದಿಂದ ಆರಂಭಿಸಿದ ಸಂಸ್ಥೆ ಸಮಾಜಕ್ಕೆ ಬಹಳಷ್ಟು ಕೊಡುಗೆ ನೀಡುತ್ತಾ ಬಂದಿದೆ. ರೋಗಿಗಳಿಗೆ ಬೇಕಾದ ಆತ್ಮೀಯತೆಯ ವಾತಾವರಣ ಸೃಷ್ಟಿಸಿಕೊಂಡು ಎಲ್ಲ ರೋಗಿಗಳ ಪಾಲಿಗೆ ಆಶಾಕಿರಣವಾಗಿದ್ದು ಆಸ್ಪತ್ರೆಯಲ್ಲಿ ಕನಿಷ್ಟ ಎರಡು ಸಾವಿರ ಮಂದಿಗೆ ಉದ್ಯೋಗವನ್ನು ಕಲ್ಪಿಸಿಕೊಡಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಚೇರ್ ಮೆನ್ ಯು.ಕೆ. ಮೋನು ಮಾತನಾಡಿದರು. ಸಂಸ್ಥೆಯ ನಿರ್ದೇಶಕ ಅಬ್ದುಲ್ ರಹಿಮಾನ್, ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ಶಿವಶರಣ್ ಶೆಟ್ಟಿ, ಡಾ. ಜಯಕರ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ಉದಯ ಕುಮಾರ್ ಶೆಟ್ಟಿ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಉಪಸ್ಥಿತರಿದ್ದರು.
ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ರೋಹನ್ ಮೋನಿಸ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.