×
Ad

ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಅರವಿಂದ ಜೈನ್ ಆಯ್ಕೆ

Update: 2019-10-25 22:56 IST
ಅರವಿಂದ ಜೈನ್

ಬೆಳ್ತಂಗಡಿ:  ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷ  ಮತ್ತು  ಉಪಾಧ್ಯಕ್ಷ  ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಬಂಡಾಯವೆದ್ದು ಸ್ಪರ್ಥಿಸಿದ್ದ ಅರವಿಂದ ಜೈನ್ ಅವರು ಕಾಂಗ್ರೆಸ್ ಬೆಂಬಲದೊಂದಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಧನಲಕ್ಷ್ಮಿ ಆಯ್ಕೆಯಾಗಿದ್ದಾರೆ.

ಸಂಘದ ನಿರ್ದೇಶಕರುಗಳ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿತ್ತು. ಬಿಜೆಪಿ ಬೆಂಬಲಿತರಿಗೆ 7 ಸ್ಥಾನಗಳು ಹಾಗೂ ಕಾಂಗ್ರೆಸ್ ಬೆಂಬಲಿತರಿಗೆ 5 ಸ್ಥಾನಗಳು ಲಭಿಸಿದ್ದವು. ಅಧ್ಯಕ್ಷ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಆತಂರಿಕ ಭಿನ್ನಮತ ಕಾಣಿಸಿಕೊಂಡಿದ್ದು ಮಾಜಿ ಅಧ್ಯಕ್ಷ  ಅರವಿಂದ ಜೈನ್ ಅಧ್ಯಕ್ಷ ಹುದ್ದೆಯನ್ನು ಬಿಟ್ಟುಕೊಡಲು ಸಿದ್ದರಾಗಲಿಲ್ಲ. ಇದರ ನಡುವೆಯೇ ಬಿಜೆಪಿ ಬೆಂಬಲಿತರು ಧರ್ಣಪ್ಪಗೌಡ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಅಧಿಕೃತ ಅಭ್ಯರ್ಥಿಯೆಂದು ಘೋಷಿಸಿದರು, ಅರವಿಂದ್ ಜೈನ್  ಅವರೂ ನಾಮಪತ್ರ ಸಲ್ಲಿಸಿದರು.

ಚುನಾವಣೆ ನಡೆದು  ಮತ ಎಣಿಕೆ ಯಲ್ಲಿ  ಅರವಿಂದ್ ಜೈನ್  ರವರು 8 ಮತಗಳಿಸಿ, ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಧರ್ಣಪ್ಪ ಗೌಡರವರು 5 ಮತಗಳನ್ನು ಮಾತ್ರ ಪಡೆದು ಪರಾಭವಗೊಂಡಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ  ಧನಲಕ್ಷ್ಮೀ ಯವರು 8 ಮತಗಳನ್ನು ಗಳಿಸಿ  ಆಯ್ಕೆಯಾಗಿದ್ದು, ತುಳಸಿ ಜಿ ಹಾರಬೆ ಯವರು 5 ಮತಗಳನ್ನು ಗಳಿಸಿ ಪರಾಭವಗೊಂಡರು. ಬಿಜೆಪಿ ಬೆಂಬಲಿತರಾದ ಇಬ್ಬರು ಸದಸ್ಯರುಗಳು  ಕಾಂಗ್ರೆಸ್ ಪಾಳಯದಲ್ಲಿ ಕಾಣಿಸಿಕೊಂಡಿದ್ದು  ಬಿಜೆಪಿ ಸೋಲಿಗೆ ಕಾರಣವಾಗಿದೆ. 

ಸಂಘದ ನಿರ್ದೇಶಕರುಗಳಾದ  ಉಷಾಲತಾ, ಜೋಯಲ್  ಮೆಂಡೋನ್ಸಾ, ಧರ್ಣಪ್ಪ ಗೌಡ, ಕೆ.ಬಿ ಮಹಾವೀರ ಬಲ್ಲಾಳ್, ಕಿಶೋರ್ ಕುಮಾರ್, ಪದ್ಮನಾಭ ಸಾಲಿಯಾನ್, ಅಬ್ದುಲ್ ರಹಿಮಾನ್ ಪಡ್ಪು, ತುಳಸಿ ಜಿ ಹಾರಬೆ, ರಮೇಶ್, ಕುಮಾರ್ ನಾಯ್ಕ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ಚುನಾವಣಾಧಿಕಾರಿಯಾಗಿ ರಿಟರ್ನಿಂಗ್ ಅಧಿಕಾರಿ  ವಿಲಾಸ್  ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

ಸಹಕಾರ ಭಾರತಿಯಿಂದ ಅರವಿಂದ್ ಜೈನ್ ಉಚ್ಚಾಟನೆ: ಸಹಕಾರ ಭಾರತಿಯ ಸೂಚನೆಯನ್ನು ಧಿಕ್ಕರಿಸಿ ಮಡಂತ್ಯಾರು ಸೇವಾಸಹಕಾರಿ ಬ್ಯಾಂಕಿನ ಅಧ್ಯಕ್ಷಸ್ತಾನಕ್ಕೆ ಸ್ಪರ್ಥಿಸಿದ್ದ ಅರವಿಂದ ಜೈನ್ ಅವರನ್ನು ಹಾಗೂ ಅವರ ಬೆಂಬಲಕ್ಕೆ ನಿಂತ ನಿರ್ಧೆಶಕ ಕುಮಾರ ನಾಯ್ಕ ಅವರನ್ನು   ಸಹಕಾರ ಭಾರತಿಯಿಂದ ಉಚ್ಚಾಟಿಸಿರುವುದಾಗಿ ತಾಲೂಕು ಅಧ್ಯಕ್ಷ ಸುಂದರ ಹೆಗ್ಡೆ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News