×
Ad

ಭಾರೀ ಗಾಳಿ, ಮಳೆ: ಬಂಟ್ವಾಳ ತಾಲೂಕಿನ ವಿವಿಧೆಡೆ ಹಾನಿ

Update: 2019-10-25 23:10 IST

ಬಂಟ್ವಾಳ, ಅ. 25: ವಾಯುಭಾರ ಕುಸಿತದ ಪ್ರಭಾವದಿಂದ ಕರಾವಳಿ ಸಹಿತ ಬಂಟ್ವಾಳ ತಾಲೂಕಿನಾದ್ಯಂತ ಗುರುವಾರ ರಾತ್ರಿಯಿಂದೀಚೆಗೆ ಸುರಿದ ಭಾರೀ ಗಾಳಿ, ಮಳೆಗೆ ಬಂಟ್ವಾಳ ತಾಲೂಕಿನ ವಿವಿಧೆಡೆ ಮಳೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

ಬಂಟ್ವಾಳ ತಾಲೂಕಿನ ಒಟ್ಟು 12 ಮನೆಗಳಿಗೆ ಹಾನಿಯಾಗಿದ್ದು, ಈ ಪೈಕಿ ಮೂವರು ಮನೆಗಳಿಗೆ ತೀವ್ರ ಹಾನಿ, 9 ಮನೆಗಳಿಗೆ ಭಾಗಶಃ ಹಾನಿ, ಮರ ಬಿದ್ದು ರಸ್ತೆಗಳಿಗೆ ಹಾನಿ, ಅಲ್ಲಲ್ಲಿ ಗುಡ್ಡ, ಆವರಣ ಗೋಡೆ ಕುಸಿತದ ಅವಘಡಗಳು ಸಂಭವಿಸಿದ್ದು, ಯಾವುದೇ ಪ್ರಾಣ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. 

12 ಮನೆಗಳಿಗೆ ಹಾನಿ

ಸಜಿಪಮೂಡ ಗ್ರಾಮದ ನಿವಾಸಿಗಳಾದ ಭಾತಿಶ್, ಅಲಿಯಬ್ಬ, ಅವ್ವಮ್ಮ ಎಂಬವರಿಗೆ ಸೇರಿದ ಮನೆಗಳಿಗೆ ಭಾಗಶಃ ಹಾನಿ, ಇಡ್ಕಿದು ಗ್ರಾಮದ ಸುರೇಶ್ ಅಮೀನ್ ಎಂಬವರ ಮನೆಗೆ ಭಾಗಶಃ ಹಾನಿ, ಸಂಕಪ್ಪ ಗೌಡ ಅವರ ಮನೆ ಮೇಲೆ ತೆಂಗಿನ ಮರ ಬಿದ್ದು ಭಾಗಶಃ ಹಾನಿ, ಸಾಲೆತ್ತೂರು ಗ್ರಾಮದ ನಿವಾಸಿಗಳಾದ ಆನಂದ ಪೂಜಾರಿ, ಸುಂದರ ಪೂಜಾರಿ ಅವರ ಮನೆಗಳಿಗೆ ಭಾಗಶಃ ಹಾನಿಯಾದರೆ, ಇಲ್ಲಿನ ಅಬ್ದುಲ್ ಖಾದರ್ ಅವರ ಮನೆಗೆ ತೀವ್ರ ಹಾನಿಯಾಗಿದೆ.

ವಿಟ್ಲ ಪಡ್ನೂರು ಗ್ರಾಮದ ಬಾಬು ಪುರುಷ, ಕೊಳ್ನಾಡು ಗ್ರಾಮದ ವಸಂತ ಅವರ ಮನೆಗಳಿಗೆ ಭಾಗಶಃ ಹಾನಿ, ಅಳಿಕೆ ಗ್ರಾಮದ ಶಶಿಧರ, ಅಜ್ಜಿಬೆಟ್ಟುವಿನ ಶ್ರೀಯಾಳ ಎಂಬವರಿಗೆ ಸೇರಿದ ಮನೆಗಳಿಗೆ ತೀವ್ರ ಹಾನಿಯಾಗಿದೆ ಎಂದು ಬಂಟ್ವಾಳ ತಾಲೂಕು ಕಚೇರಿಯ ವರದಿ ತಿಳಿಸಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ತಹಶೀಲ್ದಾರ್ ರಶ್ಮಿ. ಎಸ್.ಆರ್. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಟ್ಲ ಕಸಬಾ ಗ್ರಾಮದ ಕಡಂಬು ನಿವಾಸಿ ಜಯಂತ ಎಂಬವರ ಮನೆಯ ಆವರಣ ಗೋಡೆ ಜರಿದು ಬಿದ್ದಿದೆ.

ರಸ್ತೆ ಸಂಪರ್ಕ ಕಡಿತ

ಗಾಳಿಗೆ ಮೂರ್ಜೆ-ವಾಮದಪದವು ರಸ್ತೆಯ ಕಲಾಬಾಗಿಲುನಲ್ಲಿ ಆಲದಮರವೊಂದು ರಸ್ತೆಗಡ್ಡವಾಗಿ ಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿತು. ಇರ್ವತ್ತೂರು ಗ್ರಾಪಂ, ಅರಣ್ಯ ಇಲಾಖೆ ವೇಣೂರು ವಲಯ, ಪುಂಜಾಲಕಟ್ಟೆ ಆರಕ್ಷಕ ಠಾಣೆ, ಮೆಸ್ಕಾಂ ವಗ್ಗ ಶಾಖೆ ಸಹಕಾರದಲ್ಲಿ ಮರವನ್ನು ತೆರವುಗೊಳಿಸಲಾಯಿತು.

ಬಂಟ್ವಾಳದಲ್ಲಿ ನೇತ್ರಾವತಿ ನದಿಯ ನೀರಿನ ಮಟ್ಟ ಶುಕ್ರವಾರ ಸಂಜೆ 4.30 ಗಂಟೆ ಸುಮಾರಿಗೆ 4.3 ಮೀಟರ್ ನಲ್ಲಿ ಹರಿಯುತ್ತಿದ್ದು, ನದಿ ತೀರದಲ್ಲಿ ಪ್ರವಾಹ ಭೀತಿ ಮತ್ತಷ್ಟು ಹೆಚ್ಚಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News