ಲಾಸ್ ಏಂಜಲಿಸ್: ಭೀಕರ ಕಾಡ್ಗಿಚ್ಚು: 50,000 ಮಂದಿಗೆ ಮನೆ ಬಿಡುವಂತೆ ಸೂಚನೆ
Update: 2019-10-25 23:20 IST
ಲಾಸ್ ಏಂಜಲಿಸ್, ಅ. 25: ಅಮೆರಿಕದ ಲಾಸ್ ಏಂಜಲಿಸ್‌ನಲ್ಲಿ ವೇಗವಾಗಿ ಹಬ್ಬುತ್ತಿರುವ ಕಾಡ್ಗಿಚ್ಚಿನ ಹಿನ್ನೆಲೆಯಲ್ಲಿ, ಮನೆ ಬಿಟ್ಟು ಹೋಗುವಂತೆ ಉತ್ತರ ಲಾಸ್ ಏಂಜಲಿಸ್ ನಲ್ಲಿರುವ ಸುಮಾರು 50,000 ಮಂದಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಸಾಂಟಾ ಕ್ಲಾರಿಟ ಎಂಬಲ್ಲಿ ಗುರುವಾರ ಮಧ್ಯಾಹ್ನ ಆರಂಭವಾದ ಬೆಂಕಿ ಬಲವಾದ ಗಾಳಿಯ ಸೆಳೆತಕ್ಕೆ ಸಿಕ್ಕಿ ಈಗಾಗಲೇ 5,000 ಎಕರೆ ಪ್ರದೇಶವನ್ನು ಸುಟ್ಟುಹಾಕಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ಹೇಳಿದ್ದಾರೆ.
ನಿಯಂತ್ರಣಕ್ಕೆ ಸಿಗದೆ ಹಬ್ಬುತ್ತಿರುವ ಬೆಂಕಿಯು ಈಗಾಗಲೇ ಹಲವಾರು ಮನೆಗಳನ್ನು ಸುಟ್ಟು ಹಾಕಿದೆ. ಹಲವಾರು ರಸ್ತೆಗಳು ಮತ್ತು ಪ್ರಮುಖ ಹೆದ್ದಾರಿಯೊಂದನ್ನು ಮುಚ್ಚಲಾಗಿದೆ.
ಏರ್ ಟ್ಯಾಂಕರ್‌ಗಳು ಮತ್ತು ಹೆಲಿಕಾಪ್ಟರ್‌ಗಳ ಬೆಂಬಲದೊಂದಿಗೆ ಸುಮಾರು 500 ಮಂದಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಸೆಣಸುತ್ತಿದ್ದಾರೆ.