ಡಿ. 12ರಂದು ಚುನಾವಣೆ ನಡೆಸಲು ಜಾನ್ಸನ್ ಉತ್ಸುಕ: ಸಂಸತ್ತಿನಿಂದ ಅಂಗೀಕಾರ ಬಯಸಿದ ಬ್ರಿಟಿಶ್ ಪ್ರಧಾನಿ

Update: 2019-10-25 17:54 GMT

ಲಂಡನ್, ಅ. 25: ಡಿಸೆಂಬರ್ 12ರಂದು ಮಧ್ಯಂತರ ಚುನಾವಣೆಯನ್ನು ನಡೆಸಲು ಸಂಸತ್ತು ಅಂಗೀಕಾರ ನೀಡಿದರೆ, ನನ್ನ ಬ್ರೆಕ್ಸಿಟ್ ಒಪ್ಪಂದವನ್ನು ಪರಿಶೀಲಿಸಲು ಹೆಚ್ಚು ಸಮಯಾವಕಾಶವನ್ನು ಅದಕ್ಕೆ ನೀಡುತ್ತೇನೆ ಎಂದು ಬ್ರಿಟಿಶ್ ಪ್ರಧಾನಿ ಬೊರಿಸ್ ಜಾನ್ಸನ್ ಗುರುವಾರ ಹೇಳಿದ್ದಾರೆ.

ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರಲು (ಬ್ರೆಕ್ಸಿಟ್) ನಿಗದಿಪಡಿಸಲಾಗಿರುವ ಅಕ್ಟೋಬರ್ 31ರ ಗಡುವಿನ ಒಳಗೆ ಬ್ರೆಕ್ಸಿಟ್ ಒಪ್ಪಂದವನ್ನು ಪರಿಶೀಲಿಸಲು ಸಂಸತ್ತು ಮಂಗಳವಾರ ನಿರಾಕರಿಸಿದ ಬಳಿಕ, ಬ್ರೆಕ್ಸಿಟ್ ಕುರಿತ ಯಾವುದೇ ಚರ್ಚೆಯನ್ನು ಪ್ರಧಾನಿ ಬೊರಿಸ್ ಜಾನ್ಸನ್ ಸ್ಥಗಿತಗೊಳಿಸಿದ್ದಾರೆ.

ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ನ ನಿರ್ಗಮನದ ಗಡುವನ್ನು ಮೂರನೇ ಬಾರಿ ವಿಸ್ತರಿಸುವುದನ್ನು ಜಾನ್ಸನ್ ವಿರೋಧಿಸುತ್ತಿದ್ದಾರೆ.

‘‘ಬ್ರೆಕ್ಸಿಟ್ ಸಾಧಿಸಲು ಇರುವ ದಾರಿಯೆಂದರೆ, ಸಂಸತ್ತು ವಿವೇಚನೆಯಿಂದ ವರ್ತಿಸುವುದು. ಹಾಲಿ ಅತ್ಯುತ್ತಮ ಬ್ರೆಕ್ಸಿಟ್ ಒಪ್ಪಂದವನ್ನು ಪರಿಶೀಲಿಸಲು ಅವರಿಗೆ (ಸಂಸದರಿಗೆ) ನಿಜವಾಗಿಯೂ ಹೆಚ್ಚು ಸಮಯ ಬೇಕಾಗಿದ್ದರೆ, ಅದನ್ನು ಅವರು ಹೊಂದಬಹುದು. ಆದರೆ, ಡಿಸೆಂಬರ್ 12ರಂದು ಸಂಸದೀಯ ಚುನಾವಣೆ ನಡೆಸಲು ಅವರು ಒಪ್ಪಿಗೆ ನೀಡಬೇಕು’’ ಎಂದು ಗುರುವಾರ ಜಾನ್ಸನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News