ನವಾಝ್ ಶರೀಫ್‌ಗೆ ವೈದ್ಯಕೀಯ ನೆಲೆಯಲ್ಲಿ ಜಾಮೀನು

Update: 2019-10-25 17:56 GMT

ಲಾಹೋರ್, ಅ. 25: ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್‌ಗೆ ಲಾಹೋರ್ ಹೈಕೋರ್ಟ್ ಶುಕ್ರವಾರ ಜಾಮೀನು ನೀಡಿದೆ.

ತೀವ್ರ ಅನಾರೋಗ್ಯಕ್ಕೊಳಗಾಗಿ ಪ್ರಸಕ್ತ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಜಾಮೀನು ಲಭ್ಯವಾಗಿದೆ.

ಪಾಕಿಸ್ತಾನ್ ಮುಸ್ಲಿಮ್ ಲೀಗ್ (ನವಾಝ್) ಪಕ್ಷದ 69 ವರ್ಷದ ಮುಖ್ಯಸ್ಥನನ್ನು ಸೋಮವಾರ ರಾತ್ರಿ ನ್ಯಾಶನಲ್ ಅಕೌಂಟಬಿಲಿಟಿ ಬ್ಯೂರೋ (ಎನ್‌ಎಬಿ) ಕಚೇರಿಯಿಂದ ಲಾಹೋರ್‌ನಲ್ಲಿರುವ ಸರ್ವಿಸಸ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅವರ ದೇಹದ ಪ್ಲೇಟ್‌ಲೆಟ್ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡುಬಂದ ಬಳಿಕ ಅವರು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು.

ಕಪ್ಪು ಹಣ ಬಿಳುಪು ಪ್ರಕರಣದಲ್ಲಿ ನ್ಯಾಶನಲ್ ಅಕೌಂಟಬಿಲಿಟಿ ಬ್ಯೂರೋ ಸುಪರ್ದಿಯಲ್ಲಿರುವ ನನ್ನ ಅಣ್ಣನನ್ನು ವೈದ್ಯಕೀಯ ನೆಲೆಯಲ್ಲಿ ಬಿಡುಗಡೆಗೊಳಿಸಬೇಕು ಎಂದು ಕೋರಿ ಪಾಕಿಸ್ತಾನ್ ಮುಸ್ಲಿಮ್ ಲೀಗ್ (ನವಾಝ್) ಪಕ್ಷದ ಅಧ್ಯಕ್ಷ ಶಹಬಾಝ್ ಶರೀಫ್ ಸಲ್ಲಿಸಿದ ಅರ್ಜಿಯನ್ನು ಲಾಹೋರ್ ಹೈಕೋರ್ಟ್‌ನ ಇಬ್ಬರು ಸದಸ್ಯರ ಪೀಠವೊಂದು ಪರಿಶೀಲಿಸಿತು ಹಾಗೂ ಮನವಿಯನ್ನು ಅಂಗೀಕರಿಸಿತು.

 ಆದರೆ, ಇನ್ನೊಂದು ಪ್ರಕರಣದಲ್ಲಿ ನವಾಝ್ ಶರೀಫ್ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಇಸ್ಲಾಮಾಬಾದ್ ಹೈಕೋರ್ಟ್ ಮಂಗಳವಾರಕ್ಕೆ ಮುಂದೂಡಿರುವುದರಿಂದ ಅವರು ತಕ್ಷಣ ಬಿಡುಗಡೆಗೊಳ್ಳುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News