ಲಂಡನ್: ಕಂಟೇನರ್‌ನಲ್ಲಿ 39 ಮೃತದೇಹಗಳ ಪತ್ತೆ: ಇಬ್ಬರು ಶಂಕಿತರ ಬಂಧನ

Update: 2019-10-25 17:59 GMT

ಲಂಡನ್, ಅ. 25: ಲಂಡನ್‌ನ ಎಸೆಕ್ಸ್‌ನಲ್ಲಿ ಶೀತಲೀಕೃತ ಕಂಟೇನರ್ ಒಂದರಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ 39 ಮಂದಿಯನ್ನು ಕೊಲೆಗೈದ ಸಂಶಯದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರು ಚೆಶೈರ್‌ನ ವಾರಿಂಗ್ಟನ್ ನಿವಾಸಿಗಳಾದ ಓರ್ವ ಪುರುಷ ಮತ್ತು ಓರ್ವ ಮಹಿಳೆ. ಅವರನ್ನು ಸಾಗಾಟ ಮಾಡಲು ಪಿತೂರಿ ಹೂಡಿದ ಆರೋಪವನ್ನೂ ಬಂಧಿತರ ವಿರುದ್ಧ ಹೊರಿಸಲಾಗಿದೆ.

ಕಂಟೇನರ್‌ನ್ನು ಸಾಗಿಸುತ್ತಿದ್ದ ಲಾರಿಯ ಚಾಲಕನನ್ನು ಪೊಲೀಸರು ಇನ್ನೂ ಪ್ರಶ್ನಿಸುತ್ತಿದ್ದಾರೆ.

 ಮೃತ 31 ಪುರುಷರು ಮತ್ತು 8 ಮಹಿಳೆಯರು ಚೀನಿಯರು ಎಂದು ಹೇಳಲಾಗಿದೆ. ಎಸೆಕ್ಸ್‌ನ ಗ್ರೇಸ್ ಎಂಬಲ್ಲಿರುವ ಕೈಗಾರಿಕಾ ಪ್ರಾಂಗಣದಲ್ಲಿ ಬುಧವಾರ ಮುಂಜಾನೆ ಮೃತದೇಹಗಳು ಪತ್ತೆಯಾಗಿದ್ದವು.

ನಾರ್ದರ್ನ್ ಐರ್‌ಲ್ಯಾಂಡ್‌ನ ಆರ್ಮಗ್ ಕೌಂಟಿ ನಿವಾಸಿಯಾಗಿರುವ ಚಾಲಕ ಮೊ ರಾಬಿನ್ಸನ್‌ನನ್ನು ಪ್ರಶ್ನಿಸಲು ಪೊಲೀಸರು ಹೆಚ್ಚುವರಿ ಸಮಯಾವಕಾಶವನ್ನು ಪಡೆದುಕೊಂಡಿದ್ದಾರೆ. ಅವನನ್ನು ಬುಧವಾರವೇ ಬಂಧಿಸಲಾಗಿದೆ.

ಮರಣೋತ್ತರ ಪರೀಕ್ಷೆಗಳು ಇನ್ನಷ್ಟೇ ಆರಂಭಗೊಳ್ಳಬೇಕಾಗಿದೆ.

ಕಂಟೇನರ್ ಬೆಲ್ಜಿಯಮ್‌ನ ಝೀಬ್ರಗ್ ಬಂದರಿನಿಂದ ಥೇಮ್ಸ್ ನದಿಯ ಮೂಲಕ ಲಂಡನ್‌ನ ಪರ್‌ಫ್ಲೀಟ್‌ಗೆ ಬುಧವಾರ ಮಧ್ಯರಾತ್ರಿ 12:30ರ ಸುಮಾರಿಗೆ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News