ಒಮನ್ ನತ್ತ ಚಲಿಸಿದ ‘ಕ್ಯಾರ್’ ಚಂಡಮಾರುತ

Update: 2019-10-26 11:35 GMT

ಮಂಗಳೂರು, ಅ.26: ಅರಬ್ಬಿ ಸಮುದ್ರ ಮತ್ತು ಲಕ್ಷ ದ್ವೀಪದಲ್ಲಿ ವಾಯುಭಾರ ಕುಸಿತದಿಂದ ಕಾಣಿಸಿಕೊಂಡ ‘ಕ್ಯಾರ್’ ಚಂಡಮಾರುತವು ಒಮನ್‌ನತ್ತ ಚಲಿಸಿವೆ. ಶನಿವಾರ ಮಳೆಯ ಆರ್ಭಟ ಅಷ್ಟೇನೂ ಇಲ್ಲದಿದ್ದರೂ ಗಾಳಿಯು ತೀವ್ರ ವೇಗ ಪಡೆದಿತ್ತು. ಇದರಿಂದ ಉಳ್ಳಾಲ ಸೋಮೇಶ್ವರದಲ್ಲಿ ಕಡಲು ತನ್ನ ಆರ್ಭಟ ತೋರಿಸುತ್ತಿತ್ತು.

ಈ ಮಧ್ಯೆ ಸಮುದ್ರವು ಪ್ರಕ್ಷುಬ್ಧಗೊಂಡ ಹಿನ್ನಲೆಯಲ್ಲಿ ಸಂಭಾವ್ಯ ಅನಾಹುತ ಎದುರಿಸಲು ಕರಾವಳಿ ಕರ್ನಾಟಕದ ಕಡಲ ತೀರವಾದ ಕಾರವಾರದಲ್ಲಿ ಕೋಸ್ಟ್‌ಗಾರ್ಡ್ ವಿಮಾನವು ಸನ್ನದ್ಧವಾಗಿವೆ. ಇದು ಕಾರವಾರವನ್ನು ಕೇಂದ್ರೀಕರಿಸಿಕೊಂಡು ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕಡಲ ತೀರದ ಅಪಾಯಕ್ಕೆ ಸವಾಲೊಡ್ಡಲು ಸಜ್ಜಾಗಿವೆ. ಇದರೊಂದಿಗೆ ‘ಸಮುದ್ರ ಪ್ರಹಾರಿ’ ಎಂಬ ಹೆಸರಿನ ಒಂದು ಹಡಗು, ವೇಗ ಗಸ್ತಿನ ನಾಲ್ಕು ನೌಕೆಗಳು ಕೂಡ ಸನ್ನದ್ಧ ಸ್ಥಿತಿಯಲ್ಲಿದೆ.

ಕಡಲಿಗೆ ಇಳಿಯದಂತೆ ಸೂಚನೆ ನೀಡಿರುವುದರ ಹೊರತಾಗಿಯೂ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರೆ ಅವರ ರಕ್ಷಣೆಗೂ ಕರಾವಳಿ ತಟ ರಕ್ಷಣಾ ಪಡೆಯು ಸ್ಥಳೀಯಾಡಳಿತ ಹಾಗೂ ಮೀನುಗಾರಿಕಾ ಇಲಾಖೆಯ ಜೊತೆ ಸಂಪರ್ಕ ಸಾಧಿಸಿ ಕಾರ್ಯಾಚರಣೆಗೆ ಅಣಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News