×
Ad

ಜೆಜೆಪಿ-ಬಿಜೆಪಿ ಮೈತ್ರಿಯ ಬೆನ್ನಲ್ಲೇ ಜೈಲಿನಲ್ಲಿದ್ದ ದುಷ್ಯಂತ್ ಚೌಟಾಲ ತಂದೆಗೆ ಫರ್ಲೋ ಮಂಜೂರು

Update: 2019-10-26 19:16 IST

ಹೊಸದಿಲ್ಲಿ, ಅ.26: ಜನನಾಯಕ್ ಜನತಾ ಪಾರ್ಟಿ (ಜೆಜೆಪಿ) ನಾಯಕ ಅಜಯ್ ಚೌಟಾಲ ಅವರಿಗೆ ಎರಡು ವಾರಗಳ  ಫರ್ಲೋ  ಮಂಜೂರಾಗಿದ್ದು, ಅವರು ರವಿವಾರ ಬೆಳಗ್ಗೆ ತಾವಿರುವ ತಿಹಾರ್ ಜೈಲ್‍ನಿಂದ ಹೊರ ಬರುವ ಸಾಧ್ಯತೆಯಿದೆ.

ಶುಕ್ರವಾರವಷ್ಟೇ ಜೆಜೆಪಿ ಅಧ್ಯಕ್ಷ ದುಷ್ಯಂತ್ ಚೌಟಾಲ ತಮ್ಮ ತಂದೆಯನ್ನು ತಿಹಾರ್ ಕಾರಾಗೃಹದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಹರ್ಯಾಣ ಚುನಾವಣೆಯಲ್ಲಿ 10 ಸ್ಥಾನ ಗಳಿಸಿರುವ ಜೆಜೆಪಿ ಈಗಾಗಲೇ ಬಿಜೆಪಿಗೆ ಬೆಂಬಲ ಘೋಷಿಸಿ ಹರ್ಯಾಣಾದ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ನೂತನ ಸರಕಾರದ ಭಾಗವಾಗಲಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದಿದೆ.

ಶಿಕ್ಷಕರ ನೇಮಕಾತಿ ಹಗರಣದಲ್ಲಿ ತಪ್ಪಿತಸ್ಥರೆಂದು ಘೋಷಿತರಾಗಿ ಹತ್ತು ವರ್ಷ ಜೈಲು ಶಿಕ್ಷೆ ಅನುಭವಿಸುತ್ತಿರುವ  ಅಜಯ್ ಚೌಟಾಲ ಅವರು ಈ ಹಿಂದೆ ಐಎನ್‍ಎಲ್‍ಡಿ ಸದಸ್ಯರಾಗಿದ್ದರೂ  ಚೌಟಾಲ ಕುಟುಂಬದೊಳಗಿನ ಮನಸ್ತಾಪದ ನಂತರ ಪಕ್ಷದಿಂದ ಉಚ್ಛಾಟನೆಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News