×
Ad

ಭ್ರೂಣಲಿಂಗ ಪರೀಕ್ಷೆ ಪತ್ತೆ ಹಚ್ಚಲು ಸ್ಟಿಂಗ್ ಆಪರೇಷನ್ ನಡೆಸಿ: ಜಿಲ್ಲಾಧಿಕಾರಿ ಜಗದೀಶ್ ಸೂಚನೆ

Update: 2019-10-26 20:09 IST

ಉಡುಪಿ, ಅ.26: ಜಿಲ್ಲೆಯ ಸ್ಕಾನಿಂಗ್ ಸೆಂಟರ್‌ಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ ಭ್ರೂಣಲಿಂಗ ಪರೀಕ್ಷೆ ಮಾಡುತ್ತಿರುವವರನ್ನು ಪತ್ತೆ ಹಚ್ಚಲು ಕುಟುಕು ಕಾರ್ಯಾಚರಣೆ (ಸ್ಟಿಂಗ್ ಆಪರೇಷನ್) ನಡೆಸುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಶುಕ್ರವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಜಿಲ್ಲೆಯ ಕೆಲವು ಸ್ಕಾನಿಂಗ್ ಸೆಂಟರ್‌ಗಳಲ್ಲಿ ಭ್ರೂಣಲಿಂಗ ಪತ್ತೆ ನಡೆಯುತ್ತಿರುವ ಸಾಧ್ಯತೆ ಇದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಇಂಥ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡುವ ಮೂಲಕ ಕೂಲಂಕಷವಾಗಿ ಪರೀಕ್ಷಿಸಬೇಕು. ಕಾಯಿದೆ ರಚನೆ ಮಾಡಿದರೆ ಮಾತ್ರ ಸಮಸ್ಯೆ ಪರಿಹಾರವಾಗುವುದಿಲ್ಲ, ಕಾಯಿದೆಯ ಸಮರ್ಪಕ ಅನುಷ್ಠಾನ ಆಗಬೇಕು. ಸ್ಟಿಂಗ್ ಆಪರೇಷನ್ ನಡೆಸಿ, ಭ್ರೂಣಲಿಂಗ ಪತ್ತೆ ಮಾಡು ವವರನ್ನು ಗುರುತಿಸಿ ಅವರಿಗೆ ಕಾಯಿದೆಯನ್ವಯ ಗರಿಷ್ಠ ಶಿಕ್ಷೆ ವಿಧಿಸಬೇಕು. ಆಗ ಇತರರು ಎಚ್ಚರಗೊಳ್ಳುತ್ತಾರೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಸಭೆಯಲ್ಲಿ ಆರೋಗ್ಯ ಇಲಾಖೆಯ ಉಡುಪಿ ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಸೆಲ್ವರಾಜ್, ಡಿಎಚ್‌ಓ ಡಾ.ಅಶೋಕ್, ಜಿಲ್ಲಾ ಸರ್ಜನ್ ಡಾ. ಮಧುಸೂಧನ್ ನಾಯಕ್, ಜಿಲ್ಲಾ ಕುಟುಂಬ ಕಲ್ಯಾಣಧಿಕಾರಿ ಡಾ. ರಾಮರಾವ್ ಹಾಗೂ ಆರೋಗ್ಯ ಇಲಾಖೆ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News