×
Ad

‘ಜವಾಬ್ದಾರಿ ಅರಿತುಕೊಂಡು ಉತ್ತಮ ಪ್ರಜೆಯಾಗಲು ಮುನ್ನುಗ್ಗಿ’

Update: 2019-10-26 20:33 IST

ಮಂಗಳೂರು, ಅ.26: ‘ಮನಸ್ಸು ಮಾಡಿದರೆ ಯುವಕರು ದೇಶದ ಭವಿಷ್ಯವನ್ನು ಬದಲಾಯಿಸಬಹುದು. ಅದಕ್ಕಾಗಿ ನಿರ್ದಿಷ್ಟ ಗುರಿ ಇಟ್ಟುಕೊಂಡಿರಬೇಕು. ಯಾವುದೇ ಸ್ಪಷ್ಟ ಗುರಿ ಇಲ್ಲದೆ ಸಾಗಿದರೆ ನಮ್ಮ ಬದುಕಿಗೆ ನಾವೇ ಅನ್ಯಾಯ ಮಾಡಿದಂತಾಗಲಿದೆ. ಹಾಗಾಗಿ ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಗುರಿ ಸಾಧಿಸಲು ಮತ್ತು ಜವಾಬ್ದಾರಿ ಅರಿತುಕೊಂಡು ಉತ್ತಮ ಪ್ರಜೆಯಾಗಲು ಮುನ್ನುಗ್ಗಿ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಪಿ.ಎಸ್. ಹರ್ಷ ಹೇಳಿದರು.

ನಗರದ ಬೋಂದೆಲ್‌ನಲ್ಲಿರುವ ಎಂಎಸ್‌ಎನ್‌ಎಂ ಬೆಸೆಂಟ್ ಕ್ಯಾಂಪಸ್‌ನ ‘ಸ್ವರ್ಣ ಅಕಾಡಮಿ ಹಾಲ್’ನಲ್ಲಿ ಶುಕ್ರವಾರ ನಡೆದ ಎಂಎಸ್‌ಎನ್‌ಎಂ ಬೆಸೆಂಟ್ ಇನ್‌ಸ್ಟ್ಟಿಟ್ಯೂಟ್ ಆಫ್ ಪಿಜಿ ಸ್ಟಡೀಸ್‌ನ ಮಣೇಲ್ ಶ್ರೀನಿವಾಸ್ ನಾಯಕ್ ಜ್ಞಾನ ಸರಣಿಯ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.

ವಿದ್ಯಾರ್ಥಿಗಳು ಮಾದಕ ದ್ರವ್ಯಗಳಿಂದ ದೂರವಿರಬೇಕು. ಅನಾಥ ವಸ್ತುಗಳ ಬಗ್ಗೆ ಮತ್ತು ಅಪರಿಚಿತ ವ್ಯಕ್ತಿಗಳ ಚಲನವಲನಗಳ ಬಗ್ಗೆ ಜಾಗರೂಕರಾಗಬೇಕು. ಪೊಲೀಸರಿಗೆ ತಿಳಿಸಲು ಸಾಮಾಜಿಕ ಮಾಧ್ಯಮವನ್ನು ಬಳಸಬಹುದು ಎಂದು ಡಾ. ಹರ್ಷ ಹೇಳಿದರು.

ಎಂಎಸ್‌ಎನ್‌ಎಂ ಬೆಸೆಂಟ್ ಸಂಸ್ಥೆಯ ನಿರ್ದೇಶಕಿ ಡಾ.ಮೊಲ್ಲಿ ಎಸ್. ಚೌಧುರಿ, ಮಹಿಳಾ ರಾಷ್ಟ್ರೀಯ ಶಿಕ್ಷಣ ಸೊಸೈಟಿ (ಡಬ್ಲ್ಯುಎನ್‌ಇಎಸ್)ಯ ಅಧ್ಯಕ್ಷ ಕುಡ್ಪಿಜಗದೀಶ್ ಶೆಣೈ,ಉಪಾಧ್ಯಕ್ಷ ಮಣೇಲ್ ಅನ್ನಪ್ಪನಾಯಕ್, ಕಾರ್ಯದರ್ಶಿ ಕೆ. ದೇವಾನಂದ್ ಪೈ, ಆಡಳಿತ ಮಂಡಳಿ ಸದಸ್ಯರಾದ ನಗರ್ ನಾರಾಯಣ್ ಶೆಣೈ, ಸತೀಶ್ ಭಟ್ ಉಪಸ್ಥಿತರಿದ್ದರು.

ಪಾಯಲ್ ಸ್ವಾಗತಿಸಿದರು. ವೈಶಾಲಿ ಪ್ರಾರ್ಥಿಸಿದರು. ಅಪೂರ್ವಾ ಕಿಣಿ ವಂದಿಸಿದರು. ಶಿಬೊನಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News