ಸಾವರ್ಕರ್ ಅಮಾಯಕ ಎಂದು ನ್ಯಾಯಾಲಯ ಹೇಳಿರಲಿಲ್ಲ: ಗಾಂಧೀಜಿ ಮರಿಮೊಮ್ಮಗ ತುಷಾರ್ ಗಾಂಧಿ

Update: 2019-10-26 15:15 GMT

 ಮುಂಬೈ, ಅ. 26: ಹಿಂದುತ್ವವಾದಿ ಚಿಂತಕ ವಿನಾಯಕ ದಾಮೋದರ್ ಸಾವರ್ಕರ್‌ಗೆ ಭಾರತ ರತ್ನ ನೀಡುವಂತೆ ಆಗ್ರಹಿಸುವ ಭರವಸೆ ನೀಡಿರುವ ಮಹಾರಾಷ್ಟ್ರ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿರುವ ಮಹಾತ್ಮಾ ಗಾಂಧಿ ಅವರ ಮರಿ ಮೊಮ್ಮಗ ತುಷಾರ್ ಗಾಂಧಿ, ಸಾವರ್ಕರ್ ಮಹಾತ್ಮಾ ಗಾಂಧಿ ಹತ್ಯೆಯ ಬೆಂಬಲಿಗರಾಗಿದ್ದರು. ನ್ಯಾಯಾಲಯ ಅವರನ್ನು ಅಮಾಯಕ ಎಂದು ಘೋಷಿಸಿರಲಿಲ್ಲ ಎಂದು ಶುಕ್ರವಾರ ಹೇಳಿದ್ದಾರೆ.

ಗಾಂಧಿ ಹತ್ಯೆ ಪ್ರಕರಣದಲ್ಲಿ ವಿಚಾರಣೆ ಎದುರಿಸಿದ್ದ ಆದರೆ, ಖುಲಾಸೆಗೊಂಡಿದ್ದ ವಿ.ಡಿ. ಸಾವರ್ಕರ್ ಅವರನ್ನು ನ್ಯಾಯಾಲಯ ನಿರಪರಾಧಿ ಎಂದು ಘೋಷಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ.

‘‘ವಿನಾಯಕ ದಾಮೋದರ್ ಸಾವರ್ಕರ್ ಅವರಿಗೆ ಭಾರತ ರತ್ನ ನೀಡಬೇಕೆನ್ನುವ ಪ್ರಸ್ತಾಪವವನ್ನು ಪರಿಗಣಿಸುವ ಮೊದಲು ಬಾಪು ಹತ್ಯೆಯ ಹಿಂದಿನ ನಿಜವಾದ ಉದ್ದೇಶ ಹಾಗೂ ಪಿತೂರಿಯನ್ನು ನಾವು ಅರ್ಥ ಮಾಡಿಕೊಳ್ಳುವುದು ಮುಖ್ಯ ಎಂಬುದು ನನ್ನ ಭಾವನೆ’’ ಎಂದು ತುಷಾರ್ ಗಾಂಧಿ ಹೇಳಿದ್ದಾರೆ.

ಸಂಶಯದ ಹೊರತಾಗಿ ಸಾವರ್ಕರ್ ಅವರ ಅಪರಾಧ ಸಾಬೀತುಪಡಿಸಲು ನ್ಯಾಯಾಲಯದ ಮುಂದೆ ಸಾಕಷ್ಟು ಪುರಾವೆಗಳನ್ನು ಸಲ್ಲಿಸಿಲ್ಲ ಎಂದು ಪ್ರಕರಣದಲ್ಲಿ ಸಾವರ್ಕರ್ ಅವರನ್ನು ಖುಲಾಸೆಗೊಳಿಸುವ ಸಂದರ್ಭ ನ್ಯಾಯಾಲಯ ಪ್ರತಿಪಾದಿಸಿತ್ತು ಎಂದು ಅವರು ಹೇಳಿದ್ದಾರೆ.

ಈ ಪ್ರಕರಣದಲ್ಲಿ ಸಾವರ್ಕರ್ ಅವರನ್ನು ಖುಲಾಸೆಗೊಳಿಸಲಾಗಿತ್ತು. ಆದರೆ, ನ್ಯಾಯಾಲಯ ಅವರನ್ನು ಅಮಾಯಕ ಎಂದು ಹೇಳಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಮಹಾರಾಷ್ಟ್ರ ವಿಧಾನ ಸಭೆ ಚುನಾವಣೆಯ ತನ್ನ ಪ್ರಣಾಳಿಕೆಯಲ್ಲಿ ರಾಜ್ಯ ಬಿಜೆಪಿ ಸಾವರ್ಕರ್‌ಗೆ ಭಾರತ ರತ್ನ ನೀಡುವಂತೆ ಆಗ್ರಹಿಸಲಾಗುವುದು ಎಂದು ಭರವಸೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News