'ಪತ್ರಕರ್ತ ನರಸಿಂಹಮೂರ್ತಿ ಬಂಧನ; ಅಧಿಕಾರಸ್ಥರ ಅಸಂವಿಧಾನಿಕ ನಡೆ'
ಉಡುಪಿ, ಅ. 26: ಗೌರಿ ಮೆಮೋರಿಯಲ್ ಟ್ರಸ್ಟಿನ ಕಾರ್ಯದರ್ಶಿ ಹಾಗೂ ಸ್ವರಾಜ್ ಇಂಡಿಯಾ ಪಕ್ಷದ ರಾಜ್ಯ ಕಾರ್ಯದರ್ಶಿ ದೊಡ್ಡಿಪಾಳ್ಯ ನರಸಿಂಹ ಮೂರ್ತಿ ಅವರನ್ನು 24ರಂದು ರಾಯಚೂರು ಪೊಲೀಸರು ಬಂಧಿಸಿರುವುದರ ಹಿಂದೆ ಅಧಿಕಾರಸ್ಥರ ಅಸಂವಿಧಾನಿಕ ನಡೆ ಕಾಣುತ್ತಿದೆ ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಉಡುಪಿ ಜಿಲ್ಲಾ ಸಮಿತಿ ಆರೋಪಿಸಿದೆ.
ಸಾಮಾಜಿಕ ಕಾಳಜಿ ಉಳ್ಳವರಾದ ನರಸಿಂಹಮೂರ್ತಿ 1989ರಿಂದಲೂ ಬೆಂಗಳೂರಿನಲ್ಲಿ ಪ್ರಜಾಸತ್ತಾತ್ಮಕ ಜನಪರ ಚಳುವಳಿಗಳಲ್ಲಿ ಬಹಿರಂಗ ವಾಗಿ ಭಾಗವಹಿಸುತ್ತಿದ್ದಾರೆ. ಪೋಲಿಸರಿಂದ ತಲೆಮರೆಸಿಕೊಳ್ಳುವ ವ್ಯಕ್ತಿಯು, ಹೀಗೆ ಬಹಿರಂಗದಲ್ಲಿ ರಾಜ್ಯದ ಹಾಗು ರಾಜಧಾನಿಯ ಪೊಲೀಸ್ ವ್ಯವಸ್ಥೆಯ ಕಣ್ಣೆದುರೇ ಓಡಾಡಿಕೊಂಡು ಇರುತ್ತಾನೆಯೇ? ಇಷ್ಟು ವರ್ಷಗಳಲ್ಲಿ ಸಾರ್ವ ಜನಿಕರಲ್ಲಿ ಎದ್ದು ಕಾಣಿಸುತ್ತಿದ್ದ ನರಸಿಂಹಮೂರ್ತಿಯ ಚಹರೆಯಲ್ಲಿ, ಪೋಲಿಸರಿಗೆ ವಿನೋದ್ ಎಂಬುವವನ ಚಹರೆ ಗುರುತೇ ಹತ್ತದೇ,ನಿನ್ನೆ ಹಠಾತ್ ಗುರುತು ಹತ್ತಿರುವುದು ತೀರಾ ಅನುಮಾನಸ್ಪದ ವಾಗಿದೆ ಎಂದು ಸಮಿತಿ ತಿಳಿಸಿದೆ.
ನರಸಿಂಹಮೂರ್ತಿ ಜನರ ಸಂಕಷ್ಟಗಳ ಪರವಾಗಿ ಹೋರಾಟ ಮಾಡುತ್ತಿರು ವವರು. ಆ ಸಂದರ್ಭ ಅವರು ಅಧಿಕಾರಸ್ಥರನ್ನು ನ್ಯಾಯಯುತವಾಗಿ ಟೀಕಿಸಲು ಹಿಂಜರಿದವರಲ್ಲ. ಶಾಂತಿಯುತ ಪ್ರಜಾಸತ್ತಾತ್ಮಕ ಹೋರಾಟಗಳಲ್ಲಿ ತೊಡಗಿ ಕೊಂಡಿರುವ ನರಸಿಂಹಮೂರ್ತಿಯನ್ನು, ತಲೆಮರೆಸಿಕೊಂಡ ವ್ಯಕ್ತಿ ಎಂದು ಆರೋಪ ಹೊರಿಸಿ ಬಂಧಿಸಿರುವುದರ ಹಿಂದೆ ಅಧಿಕಾರಸ್ಥರ ಅಸಂವಿಧಾನಿಕ ನಡೆ ಕಾಣುತ್ತಿದೆ. ಈ ಮೂಲಕ ಜನರಪರವಾದ ನ್ಯಾಯಯುತ ಹೋರಾಟ ಗಳನ್ನು ಧಮನಿಸುವ, ಅಪಾಯಕಾರಿ ವಿಧಾನಗಳ ಮೂಲಕ ಪ್ರಜಾಸತ್ತಾತ್ಮಕ ಹೋರಾಟಗಾರರಲ್ಲಿ ಆತಂಕ ಹುಟ್ಟಿಸುವ ಅನ್ಯಾಯವೂ ವಿಧಿತವಾಗುತ್ತಿದೆ ಎಂದು ಅದು ದೂರಿದೆ.
ಅಕ್ರಮವಾದ ಈ ಆರೋಪ ಹಾಗು ಬಂಧನವನ್ನು ಎಲ್ಲ ಜನತಂತ್ರ ವಾದಿಗಳೂ ವಿರೋಧಿಸಬೇಕು. ನರಸಿಂಹ ಮೂರ್ತಿಯವರನ್ನು ಬೇಷರತ್ ಬಿಡುಗಡೆ ಮಾಡಬೇಕೆಂದು ವೇದಿಕೆಯ ಜಿಲ್ಲಾಧ್ಯಕ್ಷ ಜಿ.ರಾಜಶೇಖರ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.