×
Ad

ತುಳುವ ಸಿರಿ ಕುಡ್ಲ: ಕವಿ ಕೂಟ ಪದ ರಂಗಿತ ಕಾರ್ಯಕ್ರಮ

Update: 2019-10-26 21:59 IST

ಮಂಗಳೂರು, ಅ.26: ಕವಿಗಳು ಸಮಾಜದ ಋಣಾಂಶಗಳನ್ನು ಬೊಟ್ಟು ಮಾಡುವುದು ತಪ್ಪಲ್ಲ. ಆದರೆ ಅದನ್ನೇ ವೈಭವೀಕರಿಸಿ ಪ್ರಚಾರ ಪಡೆಯುವ ಬದಲು ಸಮಾಜವನ್ನು ಸರಿದಾರಿಗೆ ತರುವ ಮೌಲ್ಯ ಪ್ರತಿಪಾದನೆ ಮೂಲಕ ದಾರ್ಶನಿಕತೆ ತೋರಬೇಕು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಮಾಜಿ ಸದಸ್ಯ, ಲೇಖಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.

ದೇರಳಕಟ್ಟೆ ವಿದ್ಯಾರತ್ನ ಆಂಗ್ಲಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ಜರುಗಿದ ‘ತುಳುವ ಸಿರಿ ಕುಡ್ಲ’ ತುಳು ಭಾಷೆ- ಸಂಸ್ಕೃತಿ ಗುರ್ತಾರ್ತ ಚಾವಡಿ ಉದ್ಘಾಟನಾ ಸಮಾರಂಭದ ಸಲುವಾಗಿ ಏರ್ಪಡಿಸಲಾದ ತುಳು ಕವಿ ಕೂಟ-ಪದ ರಂಗಿತ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮೌಖಿಕ ನೆಲೆಗಳಿಂದ ಪ್ರಾರಂಭವಾದ ತುಳು ಸಾಹಿತ್ಯ ಕೃಷಿ ಬರವಣಿಗೆಯ ಲೋಕದಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ. ಅದರಂದೀಚೆಗೆ ತುಳುವಿನಲ್ಲಿ ಬೇಕಾದಷ್ಟು ಕಥೆ, ಕವನ, ನಾಟಕ, ಲೇಖನಗಳು ಬರುತ್ತಿವೆ. ಆದರೆ ಭಾಷಾ ದೃಷ್ಟಿಯಿಂದ ಅವು ತನ್ನ ಮೂಲನೆಲೆಯಷ್ಟು ಗಟ್ಟಿತನ ಹೊಂದಿಲ್ಲ ಎಂದು ಕುಕ್ಕುವಳ್ಳಿ ವಿಷಾದಿಸಿದರು.

ಕವಿಗಳಾದ ಪ್ರವೀಣ್ ಅಮ್ಮೆಂಬಳ, ವಿಜಯಲಕ್ಷ್ಮಿ ಕಟೀಲು, ರಾಜಶ್ರೀ ಟಿ. ರೈ ಪೆರ್ಲ, ಕುಶಾಲಾಕ್ಷಿ ವಿ. ಕಣ್ವತೀರ್ಥ, ಮಹೇಂದ್ರನಾಥ ಸಾಲೆತ್ತೂರು, ಲತೀಶ್ ಸಂಕೊಳಿಗೆ ಸ್ವರಚಿತ ಕವನಗಳನ್ನು ವಾಚಿಸಿದರು.

ಈ ಸಂದರ್ಭ ಗಾಯಕರಾದ ತೋನ್ಸೆ ಪುಷ್ಕಳ ಕುಮಾರ್ ಮತ್ತು ಮಾಲಿನಿ ಕೆ.ಪ್ರಸಾದ್ ಗೋಷ್ಠಿಯಲ್ಲಿ ವಾಚಿಸಲಾದ ಕವಿತೆಗಳಿಗೆ ಸ್ವರ ಸಂಯೋಜಿಸಿ ಹಾಡಿದರು. ಸತೀಶ್ ಸುರತ್ಕಲ್, ನವಗಿರಿ ಗಣೇಶ್ ಮತ್ತು ದೀಪಕ್ ರಾಜ್ ಉಳ್ಳಾಲ್ ಹಿನ್ನೆಲೆ ಸಂಗೀತದಲ್ಲಿ ಸಹಕರಿಸಿದರು.
ತುಳುವ ಸಿರಿ ಕುಡ್ಲ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಪಿ.ಡಿ. ಶೆಟ್ಟಿ ಕವಿಗೋಷ್ಠಿಯನ್ನು ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಪ್ರವೀಣ್ ಬಸ್ತಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News