×
Ad

ಎದೆನೋವು: ನವಾಝ್ ಶರೀಫ್ ಅಸ್ವಸ್ಥ

Update: 2019-10-26 22:19 IST

ಇಸ್ಲಾಮಾಬಾದ್, ಅ.26: ಲಾಹೋರ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್‌ಗೆ ಶನಿವಾರ ಆ್ಯಂಜಿನಾ ಎದೆನೋವು ಕಾಣಿಸಿಕೊಂಡಿರುವುದಾಗಿ ಮಾಧ್ಯಮ ವರದಿಯೊಂದು ಹೇಳಿದೆ.

ಹೃದಯಕ್ಕೆ ರಕ್ತದ ಹರಿವು ಕಡಿಮೆಯಾಗುವುದರಿಂದ ಉಂಟಾಗುವ ಎದೆನೋವಿಗೆ ಆ್ಯಂಜಿನಾ ಎಂದು ಕರೆಯಲಾಗುತ್ತದೆ. ಈ ಮಧ್ಯೆ 69 ವರ್ಷ ನವಾಝ್ ಶರೀಫ್ ಅವರಿಗೆ ಹೃದಯಾಘಾತವಾಗಿದೆಯೆಂದು ಕೆಲವು ಸುದ್ದಿವಾಹಿನಿಗಳಲ್ಲಿ ಪ್ರಕಟವಾದ ವರದಿಯನ್ನು, ಅವರು ಚಿಕಿತ್ಸೆ ಪಡೆಯುತ್ತಿರುವ ಲಾಹೋರ್‌ನ ಸಿಮ್ಸ್ ಆಸ್ಪತ್ರೆಯ ಪ್ರಧಾನ ವೈದ್ಯಾಧಿಕಾರಿ ಡಾ. ಮಹಮೂದ್ ಆಯಾಝ್ ನಿರಾಕರಿಸಿದ್ದಾರೆ.

ನವಾಝ್ ಅವರ ಪ್ಲೇಟ್ ಲೆಟ್ ಕಣಗಳ ಸಂಖ್ಯೆ ಹೆಚ್ಚುತ್ತಿದ್ದು, 16 ಇಂಟ್ರವಿನಸ್ ಇಮ್ಯೂನೊಗ್ಲೊಬಿನ್ ಚುಚ್ಚುಮದ್ದುಗಳನ್ನು ನೀಡಲಾಗಿದೆಯೆಂದು ಅವರು ಹೇಳಿದ್ದಾರೆ

ಪಾಕಿಸ್ತಾನದ ಮಾಜಿ ಪ್ರಧಾನಿಗೆ ನಿನ್ನೆ ರಾತ್ರಿ ಲಘು ಹೃದಯಾಘಾತವಾಗಿದ್ದು, ಅವರ ಜೀವ ಅಪಾಯದಲ್ಲಿದೆಯೆಂದು ಶರೀಫ್‌ರ ನ್ಯಾಯವಾದಿ ಖ್ವಾಝಾ ಹ್ಯಾರಿಸ್ ಇಂದು ಬೆಳಗ್ಗೆ ಹೇಳಿಕೆ ನೀಡಿದ್ದರು.

ಶರೀಫ್ ಅವರು ರೋಗನಿರೋಧಕ ಶಕ್ತಿಯ ಕೊರತೆಯ ವ್ಯಾಧಿಯಿಂದ ಬಳಲುತ್ತಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟ ಬಳಿಕ ಲಾಹೋರ್ ಹೈಕೋರ್ಟ್ ಅವರಿಗೆ ಶುಕ್ರವಾರ ಜಾಮೀನು ನೀಡುತ್ತಿದೆ. ಈ ವ್ಯಾಧಿಯಿಂದಾಗಿ ಅವರ ರಕ್ತದ ಪ್ಲೇಟ್ ಲೆಟ್ ಕಣಗಳ ಸಂಖ್ಯೆ ಗಣನೀಯ ಮಟ್ಟದಲ್ಲಿ ಕುಸಿದಿತ್ತು.

ಚೌಧುರಿ ಶುಗರ್ ಮಿಲ್ಸ್ ಭ್ರಷ್ಟಾಚಾರ ಹಗರಣಕ್ಕೆ ಸಂಬಂಧಿಸಿ ವಿಚಾರಣೆಗಾಗಿ ನ್ಯಾಯಾಲಯವು ನವಾಝ್ ಶರೀಫ್‌ರನ್ನು ರಾಷ್ಟ್ರೀಯ ಉತ್ತರದಾಯಿತ್ವ ದಳ (ಎನ್‌ಎಬಿ)ದ ಕಸ್ಟಡಿಗೆ ಒಪ್ಪಿಸಿದ್ದು, ಅವರು ಈ ತಿಂಗಳ ಆರಂಭದಿಂದ ಲಾಹೋರ್‌ನ ಕೋಟ್ ಲಾಖ್‌ಪತ್ ಜೈಲಿನಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News