×
Ad

ಮುಡಿಪು: ಸಹೋದರನಿಂದಲೇ ಹತ್ಯೆಯಾದ ವಿದ್ಯಾರ್ಥಿನಿ

Update: 2019-10-26 22:49 IST
ಫಿಯೊನಾ ಸ್ವೀಡಲ್

ಕೊಣಾಜೆ: ಕಳೆದ ಹಲವಾರು ದಿನಗಳಿಂದ ನಾಪತ್ತೆಯಾಗಿದ್ದ ಕೊಣಾಜೆ ಠಾಣೆ ವ್ಯಾಪ್ತಿಯ ಮುಡಿಪು ಬಳಿಯ ನಿವಾಸಿ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಶವವಾಗಿ ಶನಿವಾರ ಪತ್ತೆಯಾಗಿದ್ದು, ಸ್ವಂತ ಸಹೋದರನೇ ತಂಗಿಯನ್ನು ಕೊಲೆಗೈದಿರುವ ಆರೋಪಿ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಮುಡಿಪು ನಿವಾಸಿ ಫ್ರಾನ್ಸಿಸ್ ಕುಟಿನ್ಹಾ ಎಂಬವರ ಮಗಳು, ಮಂಗಳೂರಿನ ಖಾಸಗಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಫಿಯೊನಾ ಸ್ವೀಡಲ್ ಕುಟಿನ್ಹಾ (16) ಕೊಲೆಗೀಡಾದ ವಿದ್ಯಾರ್ಥಿನಿ.

ಅ.8ರಂದು ನಾಪತ್ತೆಯಾಗಿದ್ದ ಬಾಲಕಿ

ಬಾಲಕಿಯ ತಾಯಿ‌ ಸ್ಥಳೀಯ ಐಟಿ ಸಂಸ್ಥೆಯ ಉದ್ಯೋಗಿಯಾಗಿದ್ದು, ತಂದೆ‌  ಸಂಸ್ಥೆಯೊಂದಲ್ಲಿ ಉದ್ಯೋಗದಲ್ಲಿದ್ದು ಪ್ರಸ್ತುತ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಇದೇ ತಿಂಗಳ 8ರಂದು ದಸರಾ ರಜೆ ಹಿನ್ನೆಲೆಯಲ್ಲಿ ಬಾಲಕಿ,‌ ಆಕೆಯ ಸಹೋದರ ಸ್ಯಾಮ್ಸನ್‌ ಕುಟಿನ್ಹಾ ಮತ್ತು ತಂದೆ  ಮನೆಯಲ್ಲಿದ್ದರು. ಮಕ್ಕಳಿಗೆ ತಿಂಡಿ‌ ತರಲೆಂದು 11 ಗಂಟೆಯ ಸುಮಾರಿಗೆ ತಂದೆ ಮನೆಯಿಂದ ಹೊರಹೋಗಿದ್ದು ಮಧ್ಯಾಹ್ನ 1.30ಕ್ಕೆ‌ ಹಿಂದಿರುಗಿದಾಗ ಮಗಳು ಮನೆಯಲ್ಲಿರಲಿಲ್ಲ. ಈ ಬಗ್ಗೆ ಮಗನನ್ನು ಕೇಳಿದಾಗ ಮಂಗಳೂರಿಗೆ ಹೋಗುತ್ತೇನೆ ಎಂದು ಹೋಗಿರುವುದಾಗಿ ತಿಳಿಸಿದ್ದ. ಮೊಬೈಲ್ ಸ್ವಿಚ್ ಆಫ್ ಅಗಿದ್ದು ಲೊಕೇಶನ್ ಪರಿಶೀಲಿಸಿದಾಗ ಮುಡಿಪುವಿನಲ್ಲಿ ಆಫ್ ಆಗಿರುವುದು ಕಂಡು ಬಂದಿತ್ತು. ಹಣವನ್ನೂ ಕೊಂಡೊಯ್ಯದಿದ್ದು ಹಾಕಿದ್ದ ವಸ್ತ್ರದಲ್ಲೇ ನಾಪತ್ತೆಯಾಗಿದ್ದಳು. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬಾಲಕಿಯ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆಯಲ್ಲಿ ದೂರು ನೀಡಿ 12 ದಿನಗಳಾದರೂ ಬಾಲಕಿಯ ಸುಳಿವಿರಲಿಲ್ಲ. ಈ ಬಗ್ಗೆ ಮಗನನ್ನೇ ಹೆಚ್ಚಿನ ತನಿಖೆ ನಡೆಸುವಂತೆ ತಂದೆಯೂ ಒತ್ತಾಯಿಸಿದ್ದರು. ಈ ನಡುವೆ ಮಗಳ‌ ನಾಪತ್ತೆಯಿಂದ ಬೇಸತ್ತ‌ ಫ್ರಾನ್ಸಿಸ್ ಕುಟಿನ್ಹಾ ಅವರು ಕೆಥೊಲಿಕ್ ಸಭಾ ಮುಖಾಂತರ ಕಮೀಷನರ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದ್ದಲ್ಲದೆ,  ವಾರದೊಳಗೆ ಬಾಲಕಿಯನ್ನು ಪತ್ತೆ ಹಚ್ಚಲು ಪೊಲೀಸರು ವಿಫಲರಾದರೆ  ಕೆಥೊಲಿಕ್ ಸಭಾ ಮುಡಿಪು ಘಟಕ, ದಕ್ಷಿಣ ವಲಯ, ಕೇಂದ್ರೀಯ ಸಮಿತಿ ನೇತೃತ್ವದಲ್ಲಿ ಕೊಣಾಜೆ ಠಾಣೆಗೆ ಮುತ್ತಿಗೆ ಹಾಕಿ ಧರಣಿ ನಡೆಸುವ ಎಚ್ಚರಿಕೆ ನೀಡಿದ್ದರು.

ಶನಿವಾರ ಮತ್ತೆ ಬಾಲಕಿಯ ಸಹೋದರನನ್ನು ಹೆಚ್ಚಿನ ರೀತಿಯಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದರು ಎನ್ನಲಾಗಿದೆ. ಈ ಸಂದರ್ಭ ಸಹೋದರಿಯನ್ನು ಕೊಲೆಗೈದು ಮನೆಯ ಹಿಂಭಾಗದಲ್ಲಿರುವ ಗುಡ್ಡದಲ್ಲಿ ಎಸೆದಿರುವ ಬಗ್ಗೆ ಮಾಹಿತಿ ಹೊರಬಂದಿದೆ. ಆದರೆ ಈ‌ ಕೊಲೆ ಒಬ್ಬನೇ ನಡೆಸಿದನೇ, ಆತನಿಗೆ ಇತರರು ಸಹಕಾರ ನೀಡಿದ್ದರೇ ಎನ್ನುವ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಹ್ಯಾಮರ್ ನಿಂದ ತಲೆಗೆ ಹೊಡೆದು ಕೊಲೆ

ಸ್ಥಳೀಯ ಕಾಲೇಜೊಂದರಲ್ಲಿ  ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ  ಬಾಲಕಿಯ ಸಹೋದರ ಸ್ಯಾಮ್ಸನ್  ಗಾಂಜಾ ವ್ಯಸನಕ್ಕೆ ದಾಸನಾಗಿದ್ದ ಎನ್ನಲಾಗಿದ್ದು, ಇದೇ‌ ವಿಚಾರದಲ್ಲಿ ಸಹೋದರಿಯೊಂದಿಗೆ ಜಗಳ ಮಾಡಿದ್ದು, ಈ ಸಂದರ್ಭ ಸುತ್ತಿಗೆಯಲ್ಲಿ ತಲೆಯ ಹಿಂಭಾಗಕ್ಕೆ ಹೊಡೆದಿದ್ದಾನೆ. ಮೆದುಳಿಗೆ ಗಂಭೀರವಾದ ಗಾಯವಾಗಿ ಬಾಲಕಿ ಮೃತಪಟ್ಟಿದ್ದಳು. ಬಳಿಕ  ಹೆದರಿದ ಆರೋಪಿ ಸಹೋದರಿಯ ಶವ ಎಳೆದೊಯ್ದು ಮನೆಯ ಹಿಂಭಾಗದಲ್ಲಿರುವ ಗುಡ್ಡದಲ್ಲಿ ಎಸೆದಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News