×
Ad

ಕೇಂದ್ರಕ್ಕೆ ರಾಜಧರ್ಮ ನೆನಪಿಸಿದ ಸೋನಿಯಾ ಗಾಂಧಿ

Update: 2019-10-27 09:25 IST

ಹೊಸದಿಲ್ಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ದೀಪಾವಳಿ ಸಂದೇಶದಲ್ಲಿ ಕೇಂದ್ರ ಸರ್ಕಾರಕ್ಕೆ ರಾಜಧರ್ಮವನ್ನು ನೆನಪಿಸಿದ್ದಾರೆ.

"ರೈತರು ಕೃಷಿ ಉತ್ಪನ್ನಗಳನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆಗಿಂತ ತೀರಾ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದು, ಕರಾಳ ದೀಪಾವಳಿ ಆಚರಿಸುವಂತಾಗಿದೆ. ರೈತರಿಗೆ ನ್ಯಾಯಬದ್ಧ ಬೆಲೆ ದೊರಕಿಸಿಕೊಡುವುದು ಕೇಂದ್ರ ಸರ್ಕಾರದ ರಾಜಧರ್ಮ (ಕರ್ತವ್ಯ)" ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ರೈತರ ಕೃಷಿ ಸಾಧನಗಳ ವೆಚ್ಚಕ್ಕಿಂತ ಶೇಕಡ 50ರಷ್ಟು ಅಧಿಕ ಬೆಲೆಯನ್ನು ಕನಿಷ್ಠ ಬೆಂಬಲ ಬೆಲೆಯಾಗಿ ನಿಗದಿಪಡಿಸುವ ಭರವಸೆಯನ್ನು ಮೋದಿ ಸರ್ಕಾರ 2018ರಲ್ಲಿ ನೀಡಿತ್ತು. ಕೆಲ ಮಧ್ಯವರ್ತಿಗಳು ರೈತರನ್ನು ಶೋಷಿಸುತ್ತಿವೆ ಎಂದು ಹೇಳಿತ್ತು. ಆದರೆ ಮುಂಗಾರು ಬೆಳೆಗಳನ್ನು ರೈತರು ಕನಿಷ್ಠ ಬೆಂಬಲ ಬೆಲೆಗಿಂತ ಶೇಕಡ 22.5ರಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ರೈತರಿಗೆ ಸುಮಾರು 50 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಇದನ್ನು ಯಾರು ಪಾವತಿಸುತ್ತಾರೆ ಎಂದು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕೃಷಿ ಸಲಕರಣೆಗಳ ಮೇಲಿನ ಜಿಎಸ್‌ಟಿ ಹೆಚ್ಚಳ ಹಾಗೂ ಡೀಸೆಲ್ ಬೆಲೆ ಹೆಚ್ಚಳದ ಮೂಲಕ ಕೇಂದ್ರ ಸರ್ಕಾರ ರೈತರಿಗೆ ದೊಡ್ಡ ಹೊಡೆತ ನೀಡಿದೆ ಎಂದು ಸೋನಿಯಾ ಬಣ್ಣಿಸಿದ್ದಾರೆ. ರಸಗೊಬ್ಬರದ ಮೇಲೆ ಶೇಕಡ 4ರಷ್ಟು ಜಿಎಸ್‌ಟಿ ವಿಧಿಸಲಾಗಿದ್ದು, ಕೃಷಿ ಸಲಕರಣೆಗಳ ಮೇಲೆ ಶೇಕಡ 18 ಹಾಗೂ ಕೀಟನಾಶಕಗಳ ಮೇಲೆ ಶೇಕಡ 18ರಷ್ಟು ತೆರಿಗೆ ವಿಧಿಸಿ ರೈತರಿಗೆ ಹೊರೆ ಹೊರಿಸಿದ್ದರೆ, ಇನ್ನೊಂದೆಡೆ ಡೀಸೆಲ್ ಬೆಲೆ ನಿರಂತರವಾಗಿ ಏರುತ್ತಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News