×
Ad

ದ.ಕ. ಜಿಲ್ಲಾ ಮಟ್ಟದ ‘ಸುಗ್ರಾಮ ಸಂವಾದ’ ಕಾರ್ಯಕ್ರಮ

Update: 2019-10-27 12:22 IST

ಮಂಗಳೂರು, ಅ.27: ಕರ್ನಾಟಕ ಗ್ರಾಮ ಸ್ವರಾಜ್ ಪಂಚಾಯತ್ ರಾಜ್ ಅಧಿನಿಯಮ 2015 (2ನೇ ತಿದ್ದುಪಡಿ) ಪ್ರಕರಣ ಸಂಖ್ಯೆ 61ರಂತೆ ಜಿಲ್ಲೆಯ ಎಲ್ಲಾ 230 ಗ್ರಾಪಂಗಳ ಸಾಮಾಜಿಕ ನ್ಯಾಯ ಸಮಿತಿಗಳನ್ನು ಪುಮಃ ರಚಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರು ಅಧ್ಯಕ್ಷರಾಗಲು ಅವಕಾಶ ಕಲ್ಪಿಸಿ ಬಲಪಡಿಸಬೇಕೆಂದು ಸುಗ್ರಾಮ ಗ್ರಾಪಂ ಚುನಾಯಿತ ಮಹಿಳಾ ಪ್ರತಿನಿಧಿಗಳ ಸಂಘ ಒತ್ತಾಯಿಸಿದೆ.

ಕೊಣಾಜೆ ಸಮೀಪದ ಮುಡಿಪು ನವಚೇತನ ಜೀವನ ಶಿಕ್ಷಣ ಕೇಂದ್ರದಲ್ಲಿ ಜನ ಶಿಕ್ಷಣ ಟ್ರಸ್ಟ್, ಹಂಗರ್ ಪ್ರೊಜೆಕ್ಸ್ ಸುಗ್ರಾಮ ಸಂಘದ ಸಹಬಾಗಿತ್ವದಲ್ಲಿ ಶನಿವಾರ ನಡೆದ ಸುಗ್ರಾಮ ಸಂವಾದ ಸಂಕಲ್ಪ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಿದ ಸುಗ್ರಾಮವು ಸಾಮಾಜಿಕ ನ್ಯಾಯದ ಗುರಿ ಸಾಧನೆಗೆ ಗ್ರಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರುಗಳ ಸಬಲೀಕರಣದೊಂದಿಗೆ ವಾರ್ಡ್, ಗ್ರಾಮ ಸಭೆಗಳನ್ನು ಜನ ಸ್ನೇಹಿಯಾಗಿ ನಡೆಸುವುದಲ್ಲದೆ ಜನವಸತಿ ಸಭೆಗಳನ್ನು, ಸ್ಥಾಯಿ ಸಮಿತಿ ಸಭೆಗಳನ್ನು ಸಮರ್ಪಕವಾಗಿ ನಡೆಸಬೇಕು. ಗ್ರಾಪಂ ವ್ಯಾಪ್ತಿಯಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ಆಗದಂತೆ ತಡೆಗಟ್ಟುವ ಕರ್ತವ್ಯವನ್ನು ಪ್ರಕರಣ ಸಂಖ್ಯೆ 58ಸಿ ಯಂತೆ ಪರಿಣಾಮಕಾರಿಯಾಗಿ ನಿರ್ವಹಿಸಬೇಕು ಎಂದು ಆಗ್ರಹಿಸಿದೆ.

ಪ್ರಕರಣ ಸಂಖ್ಯೆ 58ಇ ಯಂತೆ ತ್ಯಾಜ್ಯ ಮುಕ್ತ ಗ್ರಾಮ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಗ್ರಾಪಂ ಕಚೇರಿಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಗ್ರಾಪಂ ಅಧ್ಯಕ್ಷರಿಗೆ ಮಾಸಿಕ 5,000 ರೂ. ಮತ್ತು ಉಪಾಧಕ್ಷರಿಗೆ 4,000 ರೂ. ಹಾಗೂ ಸದಸ್ಯರಿಗೆ 3,000 ರೂ. ಗೌರವಧನ ನಿಗದಿ ಮಾಡಬೇಕು ಎಂದು ಒತ್ತಾಯಿಸಿದೆ.

ಮನವಿ ಸ್ವೀಕರಿಸಿದ ಮಾಜಿ ಸಚಿವ, ಶಾಸಕ ಯು.ಟಿ.ಖಾದರ್ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನ ಸೆಳೆಯುವೆ ಎಂದು ಭರವಸೆ ನೀಡಿದರು.
ಪ್ರೊಭೆಷನರಿ ಐಎಎಸ್ ಅಧಿಕಾರಿ ಶಿಂಧೆ , ನರೇಗಾ ಒಂಬುಡ್ಸಮೆನ್ ರಾಮದಾಸ್ ಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಮುಹಮ್ಮದ್ ಇಕ್ಬಾಲ್, ಶಿಕ್ಷಣ ಇಲಾಖೆಯ ಪರೀಕ್ಷಕ ಸುಮಂತ್, ಫಾದರ್ ಮುಲ್ಲರ್ ಹೋಮಿಯೋಪತಿ ಆಸ್ಪತ್ರೆಯ ವಿವೇಕ್, ತಾಪಂ ಸದಸ್ಯ ಹೈದರ್ ಕೈರಂಗಳ, ಶಿಕ್ಷಣ ಪ್ರೇಮಿ ರಮೇಶ ಶೇಣವ, ಹಿರೇಬಂಡಾಡಿ ಗ್ರಾಪಂ ಅಧ್ಯಕ್ಷ ಶೌಕತ್ ಆಲಿ, ಪಜೀರ್ ಗ್ರಾಪಂ ಅಧ್ಯಕ್ಷ ಸೀತರಾಮ ಶೆಟ್ಟಿ ಸಂವಾದದಲ್ಲಿ ಪಾಲ್ಗೊಂಡಿದ್ದರು.

ಸುಗ್ರಾಮ ಸಂಘದ ಅಧ್ಯಕ್ಷೆ ದಾಕ್ಷಾಯಿಣಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಆಧ್ಯಕ್ಷೆಯರಾದ ಪ್ರಮೀಳಾ, ತುಂಗಮ್ಮ, ಸವಿತಾ ಎಸ್., ಉಮೇಶ್ವರಿ, ಹೇಮಾ, ಸಂಧ್ಯಾ, ಉಪಾಧ್ಯಕ್ಷೆಯರಾದ ಸುಧಾ ಶೆಟ್ಟಿ ಮಲ್ಲಿಕಾ, ವಿಜಯಾ, ಯಶೋಧಾ, ನಳಿನಿ ಸಂವಾದಕ್ಕೆ ಚಾಲನೆ ನೀಡಿದರು. ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಸಂವಾದವನ್ನು ನಿರ್ವಹಿಸಿದರು. ಜನ ಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಕೃಷ್ಣ ಮೂಲ್ಯ ಸ್ವಾಗತಿಸಿದರು. ಚೇತನ್ ಕುಮಾರ್, ಕಾವೇರಿ, ಶಮಿತಾ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News