ತಂಗಿಯ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆ: ಒಪ್ಪಿಕೊಂಡ ಸ್ಯಾಮ್ಸನ್

Update: 2019-10-27 12:30 GMT
ಸ್ಯಾಮ್ಸನ್

ಕೊಣಾಜೆ: ಗಾಂಜಾ, ಅಮಲು ಪದಾರ್ಥದ ದಾಸನಾಗಿದ್ದಲ್ಲದೆ, ಪ್ರೀತಿ ಪ್ರೇಮದ ವಿಷಯದಲ್ಲೂ ತಲೆಕೆಡಿಸಿಕೊಂಡಿದ್ದ ಮುಡಿಪು ನಿವಾಸಿ ಸ್ಯಾಮ್ಸನ್ ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿ ಸುತ್ತಿಗೆಯಿಂದ ತನ್ನ ತಂಗಿ ಸ್ವೀಡಲ್ ನ  ತಲೆಗೆ ಹೊಡೆದು ಕೊಲೆ ಮಾಡಿರುವುದಾಗಿ ಪೊಲೀಸರಲ್ಲಿ ಒಪ್ಪಿಕೊಂಡಿದ್ದು, ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ರವಿವಾರ ಪೊಲೀಸ್ ಅಧಿಕಾರಿಗಳು ಆರೋಪಿಯನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಿದ್ದಾರೆ.

ಮುಡಿಪು ನಿವಾಸಿ ಫ್ರಾನ್ಸಿಸ್ ಕುಟಿನ್ಹಾ ಎಂಬವರ ಮಗಳು, ಮಂಗಳೂರಿನ ಖಾಸಗಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಫಿಯೊನಾ ಸ್ವೀಡಲ್ ಕುಟಿನ್ಹಾ (16) ಅಣ್ಣನಿಂದಲೇ ಕೊಲೆಗೀಡಾದ ವಿದ್ಯಾರ್ಥಿನಿ.

ನಾಪತ್ತೆ ಪ್ರಕರಣ ದಾಖಲಾಗಿತ್ತು

ಬಾಲಕಿಯ ತಾಯಿ‌ ಸ್ಥಳೀಯ ಐಟಿ ಸಂಸ್ಥೆಯ ಉದ್ಯೋಗಿಯಾಗಿದ್ದು, ತಂದೆ‌ ಸಂಸ್ಥೆಯೊಂದಲ್ಲಿ ಉದ್ಯೋಗದಲ್ಲಿದ್ದು ಪ್ರಸ್ತುತ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಅ. 8ರಂದು ದಸರಾ ರಜೆ ಹಿನ್ನೆಲೆಯಲ್ಲಿ ಬಾಲಕಿ,‌ ಆಕೆಯ ಸಹೋದರ ಸ್ಯಾಮ್ಸನ್‌ ಕುಟಿನ್ಹಾ ಮತ್ತು ತಂದೆ ಮನೆಯಲ್ಲಿದ್ದರು. ಮಕ್ಕಳಿಗೆ ತಿಂಡಿ‌ ತರಲೆಂದು 11 ಗಂಟೆಯ ಸುಮಾರಿಗೆ ತಂದೆ ಮನೆಯಿಂದ ಹೊರಹೋಗಿದ್ದು ಮಧ್ಯಾಹ್ನ 1.30ಕ್ಕೆ‌ ಹಿಂದಿರುಗಿದಾಗ ಮಗಳು ಮನೆಯಲ್ಲಿರಲಿಲ್ಲ. ಈ ಬಗ್ಗೆ ಮಗನನ್ನು ಕೇಳಿದಾಗ ಮಂಗಳೂರಿಗೆ ಹೋಗುತ್ತೇನೆ ಎಂದು ಹೋಗಿರುವುದಾಗಿ ತಿಳಿಸಿದ್ದ. ಮೊಬೈಲ್ ಸ್ವಿಚ್  ಆಫ್ ಅಗಿದ್ದು ಲೊಕೇಶನ್ ಪರಿಶೀಲಿಸಿದಾಗ ಮುಡಿಪುವಿನಲ್ಲಿ ಆಫ್ ಆಗಿರುವುದು ಕಂಡು ಬಂದಿತ್ತು. ಹಣವನ್ನೂ ಕೊಂಡೊಯ್ಯದಿದ್ದು ಹಾಕಿದ್ದ ವಸ್ತ್ರದಲ್ಲೇ ನಾಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿತ್ತು.‌ ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣದ ಜಾಡು ಹಿಡಿದು ತನಿಖೆ ಮುಂದಿವರಿಸಿದ ಪೊಲೀಸರು ಬಾಲಕಿಯ ಸಹೋದರ ಸ್ಯಾಮ್ಸನ್ ನನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಆತ ಹ್ಯಾಮರ್ ನಿಂದ ಹೊಡೆದು ಕೊಲೆ ಮಾಡಿರುವುದಾಗಿ ಶನಿವಾರ ಒಪ್ಪಿಕೊಂಡಿದ್ದ ಮತ್ತು ಶವವನ್ನು ಮನೆಯ ಹಿಂಭಾಗದ ಗುಡ್ಡ ಪ್ರದೇಶಕ್ಕೆ ಎಸೆದಿದ್ದ ಎಂದು ಹೇಳಿಕೆ ನೀಡಿದ್ದ. ಈ ಬಗ್ಗೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ ಮೃತದೇಹದ ಕುರುಹು ಪತ್ತೆಯಾಗಿತ್ತು.

ಮೊಬೈಲ್ ವಿಷಯದಲ್ಲಿ ಜಗಳ ನಡೆದಿತ್ತು ?

ಗಾಂಜಾ ಹಾಗು ಅಮಲು ಪದಾರ್ಥಗಳ ದಾಸನಾಗಿದ್ದ ಸ್ಯಾಮ್ಸನ್ ಕಳೆದ ಹಲವು ದಿನಗಳಿಂದ ಮನೆಯಲ್ಲೇ ಉಳಿದುಕೊಂಡಿದ್ದ. ತಂದೆ ಎಷ್ಟು ಬುದ್ಧಿ ಮಾತು ಹೇಳಿದರೂ ಕೇಳುತ್ತಿರಲಿಲ್ಲ ಎನ್ನಲಾಗಿದೆ. ಇದರಿಂದ ಕೊಲೆ ಮಾಡುವ ಎರಡು ದಿನಗಳ ಮುಂಚೆಯಷ್ಟೇ ತಂದೆ ಪ್ರಾನ್ಸಿಸ್ ಅವರು ಆತನ ಮೊಬೈಲನ್ನು ತೆಗೆದುಕೊಂಡಿದ್ದರು ಎನ್ನಲಾಗಿದೆ. ಆದರೆ ತಂಗಿ ಆತನ ಎದುರೇ ಮೊಬೈಲ್ ಬಳಕೆ ಮಾಡಿಕೊಂಡಿದ್ದಳು. ಮನೆಯಲ್ಲಿ ಇವರಿಬ್ಬರೇ ಇದ್ದಾಗ ಮೊಬೈಲ್ ವಿಷಯದಲ್ಲೇ ಜಗಳವಾಗಿ‌ ಕೊನೆಗೆ ಕೋಪದಿಂದ ಸ್ಯಾಮ್ಸನ್ ಸುತ್ತಿಗೆಯಿಂದ ತಲೆಗೆ ಬಡಿದ್ದಾನೆ ಎನ್ನಲಾಗಿದೆ. ಇದರಿಂದ ತಲೆಗೆ ಗಂಭೀರ ಗಾಯವಾಗಿ ಆಕೆ ಸ್ಥಳದಲ್ಲೇ ಮೃತಪಟ್ಡಿದ್ದು, ಬಳಿಕ ಮೃತದೇಹದ ಕಾಲನ್ನು ಹಿಡಿದು ಎಳೆದುಕೊಂಡು ಹೋಗಿ ಮನೆ ಹಿಂಬದಿಯ ಗುಡ್ಡ ಪ್ರದೇಶಕ್ಕೆ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಲೇಜಿನಿಂದ ಡಿಬಾರ್ ಆಗಿದ್ದ ಸ್ಯಾಮ್ಸನ್ 

ಸ್ಥಳೀಯ ಇಂಜಿನಿಯರಿಂಗ್  ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದ ಈತ ವಿಪರೀತ ಗಾಂಜ ವ್ಯಸನಿಯಾಗಿದ್ದ ಜೊತೆಗೆ ಸರಿಯಾಗಿ ತರಗತಿಗೂ ಹಾಜರಾಗುತ್ತಿರಲಿಲ್ಲ ಎನ್ನಲಾಗಿದ್ದು, ಇದರಿಂದ ಕಾಲೇಜಿನಿಂದ ಈತ ಡಿಬಾರ್ ಆಗಿದ್ದ ಎಂದು ತಿಳಿದುಬಂದಿದೆ.

ಕಾಲೇಜಿನಲ್ಲಿದ್ದಾಗ ಅಲ್ಲೇ ಕಲಿಯುತ್ತಿದ್ದ ವಿದ್ಯಾರ್ಥಿನಿಯನ್ನು ಪ್ರೀತಿ ಮಾಡಿ ಸುತ್ತಾಟವನ್ನೂ ನಡೆಸುತ್ತಿದ್ದ ಎನ್ನಲಾಗಿದ್ದು, ನಂತರ ಆಕೆಯನ್ನು  ಈತನ ಸ್ನೇಹಿತನೇ ಪ್ರೀತಿಸಿ ಪುಸಲಾಯಿಸಿ ತನ್ನ ಬುಟ್ಟಿಗೆ ಹಾಕಿಕೊಂಡಿದ್ದು, ಇದರ ನಂತರ ಸ್ಯಾಮ್ಸನ್ ಕಂಗೆಟ್ಟು ಹೋಗಿದ್ದ. ಬಳಿಕ ಮನೆಯಲ್ಲಿಯೂ ಅದೇ ಯೋಚನೆಯಲ್ಲಿ ಮನೆಯವರೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ.

ರವಿವಾರ ಆರೋಪಿಯನ್ನು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಕರೆದುಕೊಂಡು ಬಂದು ಹೆಚ್ಚಿನ ತನಿಖೆ ನಡೆಸಿದ್ದಾರೆ. ಈ ಸಂದರ್ಭ ಈತನ ಮುಖದಲ್ಲಿ ಯಾವುದೇ ಭಯ, ಆತಂಕವಾಗಲೀ ಕಾಣುತ್ತಿರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಸ್ಥಳದಲ್ಲಿ ದಕ್ಷಿಣ ಉಪವಿಭಾಗದ ಎಸಿಪಿ ಕೋದಂಡರಾಮ, ಇ‌ನ್ ಸ್ಪೆಕ್ಟರ್ ರವಿ ನಾಯಕ್ ಹಾಗೂ ಪೊಲೀಸ್ ಸಿಬ್ಬಂದಿ ಮತ್ತು ವಿಧಿವಿಜ್ಣಾನ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

ಕಾರ್ತಿಕ್ ರಾಜ್ ಹತ್ಯೆಯಂತೆಯೇ ಇದು ಮತ್ತೊಂದು ಪ್ರಕರಣ

ಎರಡು ವರ್ಷಗಳ ಹಿಂದೆ ಪಜೀರು ಎಂಬಲ್ಲಿಯ ಕಾರ್ತಿಕ್ ರಾಜ್ ನನ್ನು ತಲೆಗೆ ಬಡಿದು ಹತ್ಯೆ ನಡೆಸಲಾಗಿತ್ತು. ಹತ್ಯೆ ಆರೋಪಿಯ ಸುಳಿವು ಸಿಗದಿದ್ದಾಗ ಹಿಂದುತ್ವ ಸಂಘಟನೆಗಳು ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಬಳಿಕ  ಆ ಕೊಲೆಯನ್ನು ಕಾರ್ತಿಕ್ ನ ತಂಗಿಯೇ ನಡೆಸಿದ್ದಳು ಎಂಬುದು ಬೆಳಕಿಗೆ ಬಂದಿತ್ತು. ಇದೀಗ ಇಂತಹದೇ ಪ್ರಕರಣವು ಮತ್ತೊಂದು ಪಜೀರು ಕಂಬ್ಲಪದವು ಬಳಿ ನಡೆದಿದ್ದು. ಸ್ವಂತ ಅಣ್ಣನೇ ತಂಗಿಯನ್ನು ಕೊಲೆ ನಡೆಸಿದ್ದಾನೆ.

ಪೊಲೀಸರು ಪ್ರಕರಣದ ಅರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದರೆ ಸ್ವಂತ ಅಣ್ಣನೇ ತಂಗಿಯ ಕೊಲೆ ನಡೆಸಿರುವುದು ಮನಸ್ಸಿಗೆ ಬೇಸರತರುತ್ತದೆ. ಯುವ ಸಮುದಾಯ ಅಮಲು ವ್ಯಸನದಿಂದ ದೂರವಿದ್ದು, ಮಾನವೀಯ ಮೌಲ್ಯಗಳನ್ನು ಅರಿತುಕೊಳ್ಳಬೇಕು.

- ಯು.ಟಿ.ಖಾದರ್, ಶಾಸಕರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News