ಐಸಿಸ್ ಮುಖ್ಯಸ್ಥ ಅಬೂಬಕರ್ ಅಲ್-ಬಗ್ದಾದಿ ಸಾವು

Update: 2019-10-28 17:19 GMT

ಬರಿಶಾ(ಸಿರಿಯ),ಅ.27: ಭಯೋತ್ಪಾದಕ ಸಂಘಟನೆ ಐಸಿಸ್‌ನ ವರಿಷ್ಠ ಹಾಗೂ ಜಗತ್ತಿನ ಮೋಸ್ಟ್‌ ವಾಂಟೆಡ್ ಉಗ್ರ ಅಬೂಬಕರ್ ಅಲ್ ಬಗ್ದಾದಿಯನ್ನು ವಾಯುವ್ಯ ಸಿರಿಯದಲ್ಲಿ ರವಿವಾರ ರಾತ್ರಿ ಅಮೆರಿಕದ ಪಡೆಗಳು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಹತ್ಯೆಗೈಯಲಾಗಿದೆ.

ಇದ್ಲಿಬ್ ಪ್ರಾಂತದಲ್ಲಿ ಅಮೆರಿಕ ನಡೆಸಿದ ಸೇನಾ ದಾಳಿಯಲ್ಲಿ ಅಲ್ ಬಗ್ದಾದಿ ಸಾವನ್ನಪ್ಪಿದ್ದಾನೆ ಎಂದು ಅಮೆರಿಕದ ಮಾಧ್ಯಮ ವರದಿಯೊಂದು ರವಿವಾರ ವರದಿ ಮಾಡಿದೆ.

 ಐಸಿಸ್ ಜೊತೆ ನಂಟು ಹೊಂದಿರುವ ಕೆಲವು ಭಯೋತ್ಪಾದಕ ಗುಂಪುಗಳು ಸಕ್ರಿಯವಾಗಿರುವ ಇದ್ಲಿಬ್ ಪ್ರಾಂತದಲ್ಲಿ ಹೆಲಿಕಾಪ್ಟರ್‌ಗಳಿಂದ ಜಿಗಿದ ಅಮೆರಿಕದ ಕಮಾಂಡೊ ಪಡೆಗಳು ಮನೆ ಹಾಗೂ ಒಂದು ಕಾರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದವು ಎಂದು ಬ್ರಿಟನ್ ಮೂಲದ ಮಾನವಹಕ್ಕುಗಳ ಸಂಘಟನೆಯಾದ ಸಿರಿನ್ ಆಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್ಸ್ ತಿಳಿಸಿದೆ.

  ಈ ಕಾರ್ಯಾಚರಣೆಯಲ್ಲಿ ಬಗ್ದಾದಿ ಜೊತೆ ಐಸಿಸ್‌ ನ ಹಿರಿಯ ನಾಯಕ ಅಬು ಯಮಾನ್ ಸೇರಿದಂತೆ 9 ಮಂದಿ ಉಗ್ರರು ಹಾಗೂ ಓರ್ವ ಮಹಿಳೆ ಮತ್ತು ಒಂಭತ್ತು ಮಂದಿ ಮಕ್ಕಳು ಮೃತಪಟ್ಟಿದ್ದಾರೆ.

ಅಮೆರಿಕದ ವಿಶೇಷ ಕಾರ್ಯಾಚರಣೆ ಪಡೆಗಳ ಕೈಗೆ ಸಿಕ್ಕಿಹಾಕುವುದರಿಂದ ತಪ್ಪಿಸಿಕೊಳ್ಳಲು ಬಗ್ದಾದಿ ತನ್ನ ಸೊಂಟಕ್ಕೆ ಕಟ್ಟಿದ್ದ ಸ್ಫೋಟಕವನ್ನು ಸ್ಫೋಟಿಸಿ, ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅಮೆರಿಕದ ಮಾಧ್ಯಮಗಳು ತಿಳಿಸಿವೆ.

 ಸಿರಿಯದಲ್ಲಿ ಐಸಿಸ್ ವಿರುದ್ಧ ಕಾದಾಡುತ್ತಿರುವ ಅಮೆರಿಕ ಬೆಂಬಲಿತ ಸಿರಿಯನ್ ಪ್ರಜಾತಾಂತ್ರಿಕ ಪಡೆ (ಎಸ್‌ಡಿಎಫ್) ವರಿಷ್ಠ ಹೇಳಿಕೆಯೊಂದನ್ನು ನೀಡಿದ್ದು, ಅಮೆರಿಕ ಪಡೆಗಳ ಜೊತೆ ನಡೆಸಲಾದ ಜಂಟಿ ಬೇಹುಗಾರಿಕೆಯ ಬಳಿಕ ಈ ಕಾರ್ಯಾಚರಣೆ ನಡೆಸಲಾಯಿತೆಂದು ತಿಳಿಸಿದ್ದಾರೆ.

ಅಮೆರಿಕ ನೇತೃತ್ವದ ಮೈತ್ರಿಪಡೆಗಳು ದೀರ್ಘ ಸಮಯದಿಂದ ಬೇಟೆಯಾಡುತ್ತಿವೆ. ಬಗ್ದಾದಿ ಮೃತಪಟ್ಟಿದ್ದಾನೆಂದು ಇತ್ತೀಚೆಗೆ ಹಲವಾರು ಬಾರಿ ವರದಿಯಾಗಿತ್ತಾದರೂ, ಆನಂತರ ಅದನ್ನು ಅಮೆರಿಕ ನಿರಾಕರಿಸಿತ್ತು.

2014ರಲ್ಲಿ ಸಿರಿಯ ಹಾಗೂ ನೆರೆಯ ರಾಷ್ಟ್ರವಾದ ಇರಾಕ್‌ನ ವಿಶಾಲ ಪ್ರದೇಶಗಳನ್ನು ಐಸಿಸ್ ಆಕ್ರಮಿಸಿಕೊಂಡಿತ್ತು. 48 ವರ್ಷ ವಯಸ್ಸಿನ ಬಗ್ದಾದಿ ಮೂಲತಃ ಇರಾಕ್ ದೇಶದವನಾಗಿದ್ದು, ಆತ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದುದು ತೀರಾ ಅಪರೂಪವಾಗಿತ್ತು.

ಐಸಿಸ್‌ಗೆ ಅತಿ ದೊಡ್ಡ ಹೊಡೆತ

     ವಾಯುವ್ಯ ಸಿರಿಯದಲ್ಲಿ ಶನಿವಾರ ರಾತ್ರಿ ಐಸಿಸ್ ವರಿಷ್ಠ ಅಬೂಬಕರ್ ಅಲ್ ಬಗ್ದಾದಿಯನ್ನು ಹತ್ಯೆಗೈದಿರುವುದು ಭಯೋತ್ಪಾದಕ ಗುಂಪಿಗೆ ಆಗಿರುವ ಅತಿ ದೊಡ್ಡ ಹೊಡೆತವಾಗಿದೆ. ಬಗ್ದಾದಿ ಬಳಿಕ ತನ್ನ ನಾಯಕತ್ವವನ್ನು ಯಾರು ವಹಿಸಿಕೊಳ್ಳಲಿದ್ದಾರೆಂದು ಐಸಿಸ್ ಈ ತನಕ ಯಾವುದೇ ಹೇಳಿಕೆಯನ್ನು ನೀಡಿಲ್ಲ.

  ಬಗ್ದಾದಿಯ ಉತ್ತರಾಧಿಕಾರಿಯಾಗಿ ಯಾರೇ ಆಯ್ಕೆಯಾದರೂ, ಅವರಿಗೆ ಜಾಗತಿಕ ಮಟ್ಟದಲ್ಲಿ ಭಯೋತ್ಪಾದಕರಿಂದ ಹೆಚ್ಚಿನ ಮಾನ್ಯತೆ ದೊರೆಯಲಾರದು ಎಂದು ರಾಜಕೀಯ ವಿಶ್ಲೇಷಕರು ತಿಳಿಸಿದ್ದಾರೆ.

  ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಎಂದು ಮೊದಲಿಗೆ ಕರೆಸಿಕೊಳ್ಳುತ್ತಿದ್ದ ಈ ಗುಂಪಿನ ನೇತೃತ್ವವನ್ನು ಬಗ್ದಾದಿ 2010ರಲ್ಲಿ ವಹಿಸಿಕೊಂಡಿದ್ದ. ಆನಂತರ ಈ ಭೀಕರ ಭಯೋತ್ಪಾದಕ ಗುಂಪು ಕೆಲವೇ ವರ್ಷಗಳಲ್ಲಿ ಸಿರಿಯಾ ಹಾಗೂ ಇರಾಕ್ ವಿಶಾಲವಾದ ಪ್ರದೇಶಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು.

ಬಗ್ದಾದಿ ಹತ್ಯೆಯನ್ನು ದೃಢಪಡಿಸಿದ ಟ್ರಂಪ್

ಅಮೆರಿಕ ಪಡೆಗಳು ಇದ್ಲಿಬ್ ಪ್ರಾಂತದಲ್ಲಿ ರವಿವಾರ ರಾತ್ರಿ ನಡೆಸಿದ ಕಾರ್ಯಾಚರಣೆಲ್ಲಿ ಐಸಿಸ್ ಮುಖ್ಯಸ್ಥ ಅಬೂಬಕರ್ ಅಲ್ ಬಗ್ದಾದಿ ಸಾವನ್ನಪ್ಪಿರುವುದನ್ನು ಅಮೆರಿಕಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವಿವಾರ ದೃಢಪಡಿಸಿದ್ದಾರೆ.

ಶ್ವೇತಭವನದ ಮೂಲಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ಐಸಿಸ್ ವರಿಷ್ಠ ಬಗ್ದಾದಿಯ ಹತ್ಯೆಯ ವಿವರಗಳನ್ನು ನೀಡಿದ್ದಾರೆ.

  ಕುರ್ದ್ ಹೋರಾಟಗಾರರಿಂದ ಕೆಲವು ಉಪಯುಕ್ತ ಮಾಹಿತಿ ಸೇರಿದಂತೆ ಬಗ್ದಾದಿಯ ಇರುವಿಕೆಯ ಕುರಿತಾಗಿ ಅಮೆರಿಕಕ್ಕೆ ಸುಮಾರು ಒಂದು ತಿಂಗಳ ಹಿಂದೆ ಗುಪ್ತಚರ ಮಾಹಿತಿಗಳು ದೊರೆತಿದ್ದವು ಎಂದು ಟ್ರಂಪ್ ತಿಳಿಸಿದರು. ಬಗ್ದಾದಿಯ ಇರುವ ಸ್ಥಳದ ಬಗ್ಗೆ ನಿಖರ ಮಾಹಿತಿಯನ್ನು ಕಲೆಹಾಕಲು ಅಮೆರಿಕದ ಬೇಹುಗಾರಿಕಾ ಅಧಿಕಾರಿಗಳಿಗೆ ಸಾಧ್ಯವಾಗಿತ್ತು ಎಂದು ಟ್ರಂಪ್ ತಿಳಿಸಿದರು.

ಬಗ್ದಾದಿ ವಿರುದ್ಧ ಕಾರ್ಯಾಚರಣೆಗಾಗಿ ಅಮೆರಿಕ ಪಡೆಗಳು ರಶ್ಯ, ಇರಾಕ್ ಹಾಗೂ ಟರ್ಕಿಗಳ ವಾಯುಪ್ರದೇಶದಲ್ಲಿ ಹಾರಾಟನಡೆಸಬೇಕಾದ್ದರಿಂದ, ಆ ದೇಶಗಳ ಅನುಮತಿಯನ್ನು ಪಡೆಯವುದು ಕೂಡಾ ಅಗತ್ಯವಾಗಿತ್ತು ಎಂದು ಟ್ರಂಪ್ ಹಾಗೂ ಅವರ ರಾಷ್ಟ್ರೀಯ ಭದ್ರತಾಸಲಹೆಗಾರ ರಾಬರ್ಟ್ ಬ್ರಿಯಾನ್ ತಿಳಿಸಿದ್ದಾರೆ.

ಶ್ವೇತಭವನದಿಂದಲೇ ಕಾರ್ಯಾಚರಣೆಯ ನೇರ ಪ್ರಸಾರ ವೀಕ್ಷಿಸಿದ ಟ್ರಂಪ್

ಸಿರಿಯದ ಇದ್ಲಿಬ್ ಪ್ರಾಂತದಲ್ಲಿ ಅಮೆರಿಕದ ಡೆಲ್ಟಾ ಪಡೆಗಳು ಬಗ್ದಾದಿ ಅಡಗುದಾಣದ ಮೇಲೆ ನಡೆಸಿದ ಇಡೀ ಕಾರ್ಯಾಚರಣೆಯ ನೇರ ಪ್ರಸಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದಲ್ಲಿ ಕುಳಿತುಕೊಂಡೇ ವೀಕ್ಷಿಸಿದರು. ಅಮೆರಿಕದ ಉಪಾಧ್ಯಕ್ಷ ಮೈಕ್ ಪೆನ್ಸ್, ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಬ್ರಿಯಾನ್ ಹಾಗೂ ಬೇಹುಗಾರಿಕಾ ಇಲಾಖೆ.ಯ ಅಧಿಕಾರಿಗಳು ಅವರ ಜೊತೆಗಿದ್ದರು. ಇಡೀ ಕಾರ್ಯಾಚರಣೆಯ ನೇರಪ್ರಸಾರವನ್ನು ಸಿನೆಮಾದ ಹಾಗೆ ತಾವೆಲ್ಲರೂ ವೀಕ್ಷಿಸಿರುವುದಾಗಿ ಟ್ರಂಪ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News