ಒಂದು ದಾಳಿ ನಡೆದರೂ ಯುದ್ದ ಆರಂಭ: ಅಮೆರಿಕಾಗೆ ಇರಾನ್ ಎಚ್ಚರಿಕೆ
Photo: Unsplash
ಟೆಹ್ರಾನ್, ಜ.24: ಟೆಹ್ರಾನ್ ಕಡೆಗೆ ಅಮೆರಿಕಾದ ಯುದ್ದನೌಕೆಗಳ ದೊಡ್ಡ ಪಡೆ ಸಾಗುತ್ತಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವುದಕ್ಕೆ ಪ್ರತಿಕ್ರಿಯಿಸಿರುವ ಇರಾನಿನ ಹಿರಿಯ ಅಧಿಕಾರಿಯೊಬ್ಬರು `ದೇಶದ ಮೇಲೆ ನಡೆಯುವ ಒಂದೇ ಒಂದು ದಾಳಿಯನ್ನೂ ನಮ್ಮ ವಿರುದ್ದದ ಸಂಪೂರ್ಣ ಯುದ್ದವೆಂದು ಪರಿಗಣಿಸುವುದಾಗಿ' ಎಚ್ಚರಿಕೆ ನೀಡಿದ್ದಾರೆ.
ಅಮೆರಿಕಾದ ಮಿಲಿಟರಿ ಜಮಾವಣೆಯನ್ನು ನೇರ ಬೆದರಿಕೆಯೆಂದು ಇರಾನ್ ಪರಿಗಣಿಸುತ್ತದೆ ಮತ್ತು ದಾಳಿಯ ವೇಳೆ ಪ್ರತೀಕಾರ ತೀರಿಸಲು ತನ್ನ ಬತ್ತಳಿಕೆಯಲ್ಲಿರುವ ಎಲ್ಲವನ್ನೂ ಬಳಸಲಾಗುವುದು. ಅಮೆರಿಕಾವು ಮಿಲಿಟರಿಯನ್ನು ಸಜ್ಜುಗೊಳಿಸಿರುವುದು ನಿಜವಾದ ಮುಖಾಮುಖಿಯ ಉದ್ದೇಶದಿಂದಲ್ಲ ಎಂದು ನಾವು ಭಾವಿಸುತ್ತೇವೆ. ಆದರೆ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ನಮ್ಮ ಮಿಲಿಟರಿ ಸಿದ್ಧವಾಗಿದೆ. ಇರಾನಿನಲ್ಲಿ ಎಲ್ಲವನ್ನೂ ಈಗ `ಹೈ ಅಲರ್ಟ್'ನಲ್ಲಿ ಇರಿಸಲಾಗಿದೆ' ಎಂದು ಅಧಿಕಾರಿಯ ಹೆಸರು ಉಲ್ಲೇಖಿಸದೆ `ರಾಯ್ಟರ್ಸ್' ವರದಿ ಮಾಡಿದೆ.
ಈ ಬಾರಿ ನಾವು ಯಾವುದೇ ದಾಳಿಯನ್ನು - ಸೀಮಿತ, ಅನಿಯಮಿತ, ಸರ್ಜಿಕಲ್ ಅಥವಾ ಇನ್ನಿತರ ಯಾವುದಾದರೂ- ನಮ್ಮ ವಿರುದ್ದದ ಸಂಪೂರ್ಣ ದಾಳಿಯೆಂದು ಪರಿಗಣಿಸುತ್ತೇವೆ ಮತ್ತು ಇದಕ್ಕೆ ನಾವು ಸಾಧ್ಯವಾದಷ್ಟು ಕಠಿಣ ರೀತಿಯಲ್ಲಿ ಪ್ರತಿಕ್ರಿಯಿಸುತ್ತೇವೆ. ಅಮೆರಿಕನ್ನರು ಇರಾನಿನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಉಲ್ಲಂಘಿಸಿದರೆ ನಾವು ಪ್ರತಿಕ್ರಿಯಿಸುತ್ತೇವೆ' ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.