ಟೆಕ್ಸಾಸ್ ಶೂಟೌಟ್: ಇಬ್ಬರ ಹತ್ಯೆ 12 ಮಂದಿಗೆ ಗಾಯ, ಹಂತಕ ಪರಾರಿ

Update: 2019-10-28 17:54 GMT

ಗ್ರೀನ್‌ವಿಲ್ಲೆ,ಅ.28: ಟೆಕ್ಸಾಸ್ ರಾಜ್ಯದಲ್ಲಿ ರವಿವಾರ ನಡೆದ ಕಾಲೇಜ್ ವಿದ್ಯಾರ್ಥಿಗಳು ನಡೆಸಿದ ಮೋಜಿನಕೂಟವೊಂದರಲ್ಲಿ ನಡೆದ ಶೂಟೌಟ್‌ನಲ್ಲಿ ಇಬ್ಬರು ಮೃತಪಟ್ಟಿದ್ದು, ಕನಿಷ್ಠ 12 ಮಂದಿ ಗಾಯಗೊಂಡಿದ್ದಾರೆ. ಗುಂಡುಹಾರಾಟದ ಬಳಿಕ ಗಾಬರಿಯಿಂದ ಓಡುತ್ತಿದ್ದ ಜನಜಂಗುಳಿಯ ಮಧ್ಯೆ ಹಂತಕನು ಕೂಡಾ ಪರಾರಿಯಾಗಿದ್ದಾನೆ.

 ಟೆಕ್ಸಾಸ್‌ನ ಎಆ್ಯಂಡ್‌ಎಂ ವಿಶ್ವವಿದ್ಯಾನಿಲಯದ ಉಪಕ್ಯಾಂಪಸ್‌ನಲ್ಲಿ ಈ ಶೂಟೌಟ್ ನಡೆದಿದೆ. ಹಂತಕನು ಕೇವಲ ಒಬ್ಬ ವ್ಯಕ್ತಿಯನ್ನು ಗುರಿಯಾಗಿರಿಸಿಕೊಂಡು ಗುಂಡಿನ ದಾಳಿ ನಡೆಸಿರಬೇಕು ಹಾಗೂ ಆತ ಯದ್ವಾತದ್ವಾ ಗುಂಡುಹಾರಿಸಿದ್ದರಿಂದ ಇತರರಿಗೂ ಗುಂಡೇಟು ತಗಲಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. ಶಂಕಿತ ಹಂತಕನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದಾರೆಂದು ಹಂಟ್ ಕೌಂಟಿಯ ಪೊಲೀಸ್ ವರಿಷ್ಠ ರ್ಯಾಂಡಿ ಮೀಕ್ಸ್ ತಿಳಿಸಿದ್ದಾರೆ. ಹಂತಕನನ್ನು ಈವರೆಗೆ ಗುರುತಿಸಲು ಸಾಧ್ಯವಾಗಿಲ್ಲವೆಂದು ಅವರು ಹೇಳಿದ್ದಾರೆ

 ಟೆಕ್ಸಾಸ್‌ನ ಎಆ್ಯಂಡ್‌ಎಂ ವಾಣಿಜ್ಯ ವಿವಿಯಲ್ಲಿ ಶನಿವಾರ ಮಧ್ಯರಾತ್ರಿ ಹ್ಯಾಲೊವಿನ್ ಹಾಗೂ ಹೋಂಕಮಿಂಗ್ ಪಾರ್ಟಿಯನ್ನು ಆಯೋಜಿಸಲಾಗಿತ್ತು. ಆದರೆ ಈ ಮೋಜಿನಕೂಟಕ್ಕೆ ವಿವಿಯ ಆಡಳಿತದಿಂದ ಅನುಮತಿಯಿರಿಲ್ಲವೆಂದು ತಿಳಿದುಬಂದಿದೆ. ಪುರುಷ ಶೂಟರ್ ಒಬ್ಬಾತ ಹಿಂಭಾಗದಿಂದ ಪ್ರವೇಶಿಸಿ, ಹ್ಯಾಂಡ್‌ಗನ್‌ನಿಂದ ಗುಂಡುಹಾರಿಸಿದ್ದಾನೆಂದು ಮೀಕ್ಸ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News