×
Ad

ಶೀಘ್ರದಲ್ಲೇ ಮಂಗಳೂರು ವಿಮಾನ ನಿಲ್ದಾಣ ‘ಅದಾನಿ’ ತೆಕ್ಕೆಗೆ!

Update: 2019-10-30 13:35 IST

ಮಂಗಳೂರು, ಅ.30: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಗುರುತಿಸಲ್ಪಟ್ಟಿರುವ ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆಯ ಗುತ್ತಿಗೆಯನ್ನು ಗುಜರಾತ್ ಮೂಲದ ಅದಾನಿ ಗ್ರೂಪ್ ವಹಿಸಿಕೊಂಡಿದ್ದು, ಆಡಳಿತಾತ್ಮಕ ಪ್ರಕ್ರಿಯೆ ಆರಂಭಗೊಂಡಿದೆ. ಸರಕಾರದ ಪ್ರಕ್ರಿಯೆಗಳು ಪೂರ್ಣಗೊಂಡು ಕನಿಷ್ಠ ಒಂದು ವರ್ಷದ ಬಳಿಕ ವಿಮಾನ ನಿಲ್ದಾಣ ಸಂಪೂರ್ಣವಾಗಿ ಗುಜರಾತ್ ಮೂಲದ ಉದ್ಯಮಿ ಗೌತಮ್ ಅದಾನಿ ಒಡೆತನಕ್ಕೆ ಒಳಪಡುವ ಸಾಧ್ಯತೆ ಇದೆ.

ಸಾರ್ವಜನಿಕ- ಖಾಸಗಿ ಪಾಲುದಾರಿಕೆ ನಿರ್ಧಾರಣಾ ಸಮಿತಿ (ಪಿಪಿಪಿಎಸಿ) ಮೂಲಕ ಸಾರ್ವಜನಿಕ- ಖಾಸಗಿ ಪಾಲುದಾರಿಕೆ ಅಡಿಯಲ್ಲಿ ಕಾರ್ಯಾಚರಣೆ, ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ದೇಶದ ಅಹ್ಮದಾಬಾದ್, ಜೈಪುರ, ಲಖನೌ, ಗುವಾಹಟಿ, ತಿರುವನಂತಪುರಂ ಮತ್ತು ಮಂಗಳೂರು ಸೇರಿ ಆರು ವಿಮಾನ ನಿಲ್ದಾಣಗಳ ತಾತ್ವಿಕ ಗುತ್ತಿಗೆ ಕೇಂದ್ರ ಸರಕಾರ ಕಳೆದ ಡಿಸೆಂಬರ್‌ನಲ್ಲಿ ಅನುಮೋದನೆ ನೀಡಿತ್ತು.

 ಕೇಂದ್ರ ಸರಕಾರ ಕಳೆದ ಡಿಸೆಂಬರ್‌ನಲ್ಲಿ ನಡೆಸಿದ ಬಿಡ್‌ನಲ್ಲಿ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಗುಜರಾತ್ ಮೂಲದ ಗೌತಮ್ ಅದಾನಿ ಒಡೆತನದ ಅದಾನಿ ಗ್ರೂಪ್ ಪಡೆದುಕೊಂಡಿದೆ. 50 ವರ್ಷಗಳ ಒಪ್ಪಂದ ಇದಾಗಿದ್ದು, ವಿಮಾನ ನಿಲ್ದಾಣಗಳ ನಿರ್ವಹಣೆ, ಟರ್ಮಿನಲ್ಗಳ ಅಭಿವೃದ್ಧಿ, ಗ್ರಾಹಕ ಸ್ನೇಹಿ ಯೋಜನೆಗಳು ಮೊದಲಾದ ಜವಾಬ್ದಾರಿಗಳನ್ನು ಖಾಸಗಿ ಕಂಪನಿ ನಿರ್ವಹಿಸಬೇಕಿದೆ. ಆದರೆ ತಾಂತ್ರಿಕ ನಿರ್ವಹಣೆಯನ್ನು ಮಾತ್ರ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ನಿರ್ವಹಿಸಲಿದೆ.

ವಿಮಾನ ನಿಲ್ದಾಣ ಖಾಸಗಿ ಒಡೆತನದ ನಿರ್ವಹಣೆಗೆ ಒಳಪಡುವುದರಿಂದ ಕೆಲವೊಂದು ಬದಲಾವಣೆ ಆಗಲಿದೆ. ಮಾಸಿಕವಾಗಿ ಪ್ರಯಾಣಿಕನೊಬ್ಬನಿಗೆ ವಿಧಿಸುವ ಶುಲ್ಕದ ಮಾನದಂಡವನ್ನು ಪರಿಗಣಿಸಿ ಹರಾಜು ನಡೆದಿದ್ದು, ಮುಂದೆ ಇದೇ ಶುಲ್ಕದ ಆಧಾರದಲ್ಲಿ ವಿಮಾನ ನಿಲ್ದಾಣದ ನಿರ್ವಹಣೆಯ ವೆಚ್ಚಗಳು ನಿಗದಿಯಾಗಲಿದೆ.

ಮುಖ್ಯವಾಗಿ ಟರ್ಮಿನಲ್ ಒಳಗಡೆ ಇರುವ ವಾಣಿಜ್ಯ ಮಳಿಗೆಗಳ ಮಾಸಿಕ ಬಾಡಿಗೆಗಳು ಏರಿಕೆಯಾಗಲಿವೆ. ಇದರಿಂದ ಗ್ರಾಹಕರಿಗೆ ದೊರೆಯುವ ಸೇವೆಗಳ ದರಗಳು ದುಪ್ಪಟ್ಟಾಗುವ ಸಾಧ್ಯತೆ ಇದೆ. ಇದರ ಜತೆಯಲ್ಲೇ ವಿಮಾನ ಹಾರಾಟಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. ದೇಶದ ಬಹುತೇಕ ನಗರಗಳಿಗೆ ವಿಮಾನ ಸೇವೆ ಲಭ್ಯವಾಗುವ ಸಾಧ್ಯತೆಗಳೂ ಇವೆ. ಅಲ್ಲದೆ ವಿದೇಶದ ಹಲವು ಪ್ರಸಿದ್ಧ ವಿಮಾನಯಾನ ಕಂಪೆನಿಗಳ ವಿಮಾನಗಳು ಕೂಡಾ ಮಂಗಳೂರಿನಿಂದ ಸೇವೆ ಆರಂಭಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಈ ನಡುವೆ, ವಿಮಾನ ನಿಲ್ದಾಣ ಖಾಸಗೀಕರಣ ಹಿನ್ನೆಲೆಯಲ್ಲಿ ಸದ್ಯ ವಿಮಾನ ನಿಲ್ದಾಣದ ಕೆಲ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಆತಂಕವನ್ನು ಎದುರಿಸುತ್ತಿದ್ದಾರೆ. ಆದರೆ, ಸದ್ಯ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಅನ್ಯಾಯವಾಗದಂತೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಅದಾನಿ ಸಂಸ್ಥೆ ಮೂಲಗಳು ತಿಳಿಸಿವೆ. 


ರನ್‌ವೇ ವಿಸ್ತರಣೆಗೆ ಆದ್ಯತೆ
ಅದಾನಿ ಸಂಸ್ಥೆ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗೆ ಆದ್ಯತೆ ನೀಡಲಿದ್ದು, ದೇಶ ವಿದೇಶಗಳಿಗೆ ಸಂಚರಿಸುವ ವಿಮಾನಗಳ ಸಂಖ್ಯೆ ಏರಿಕೆಯಾಗಲಿದೆ. ಮುಂಬೈ ಮಾದರಿಯಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲೂ ಪ್ರತ್ಯೇಕ ಕಾಂಪ್ಲೆಕ್ಸ್, ಮಾಲ್‌ಗಳು ರಚನೆಯಾಗಲಿವೆ. ಮುಖ್ಯವಾಗಿ ಮಂಗಳೂರು ಮಾತ್ರವಲ್ಲದೆ, ಉಡುಪಿ ಹಾಗೂ ಹೊರ ಜಿಲ್ಲೆಗಳಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಸಂಪರ್ಕ ವ್ಯವಸ್ಥೆ (ರಸ್ತೆ ಮಾರ್ಗ)ಯನ್ನು ಅಭಿವೃದ್ಧಿಪಡಿಸಲಾಗುವುದು. ಮುಂದೆ ಅಂತರ್ ರಾಷ್ಟ್ರೀಯ ವಿಮಾನಗಳು ಮಾತ್ರವಲ್ಲದೆ, ದೇಶೀಯ ವಿಮಾನಗಳ ಹಾರಾಟದಲ್ಲೂ ಹೆಚ್ಚಳವಾಗಲಿದೆ. ಈ ಮೂಲಕ ಮಂಗಳೂರು ಏರ್‌ಪೋರ್ಟ್ ಸಂಪೂರ್ಣವಾಗಿ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿದೆ. ಸರಕಾರದ ಪ್ರಕ್ರಿಯೆಗಳು ಮುಗಿದು ಅದಾನಿ ಸಂಸ್ಥೆ ಸಂಪೂರ್ಣ ರೀತಿಯಲ್ಲಿ ನಿರ್ವಹಣೆಯನ್ನು ವಹಿಸಲು ಕನಿಷ್ಠ ಇನ್ನೂ ಒಂದು ವರ್ಷ ಬೇಕಾಗಬಹುದು.

-ಕಿಶೋರ್ ಆಳ್ವ, ಅಧ್ಯಕ್ಷರು, ಅದಾನಿ ಸಮೂಹ ಸಂಸ್ಥೆ- ಕರ್ನಾಟಕ
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News