×
Ad

ಸಿದ್ದರಾಮಯ್ಯ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಶೋಭಾ ಕರಂದ್ಲಾಜೆ

Update: 2019-10-30 16:52 IST

ಉಡುಪಿ, ಅ.30: ಅಧಿಕಾರ ಕಳೆದುಕೊಂಡ ನಂತರ ಸಿದ್ದರಾಮಯ್ಯ ಮಾನಸಿಕ ಸ್ಥಿಮಿತವನ್ನೂ ಕಳೆದುಕೊಂಡಿದ್ದಾರೆ. ಈ ಉಪ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧೆ ಮಾಡಿ ಎಲ್ಲ ಕ್ಷೇತ್ರವನ್ನು ಗೆಲ್ಲಲಿದೆ. ಮೂರುವರೆ ವರ್ಷಗಳ ಕಾಲ ಬಿಜೆಪಿಯೇ ಆಡಳಿತ ಮಾಡುತ್ತದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಬಿಜೆಪಿ- ಜೆಡಿಎಸ್ ಒಳಒಪ್ಪಂದ ಮಾಡಿಕೊಂಡಿದೆ ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತು ಮಾಧ್ಯಮದವರು ಉಡುಪಿಯಲ್ಲಿಂದು ಕೇಳಿದ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು. ಕಾಂಗ್ರೆಸ್‌ನ್ನು ಬ್ಲಾಕ್‌ಮೇಲ್ ಮಾಡಿ ವಿಪಕ್ಷದ ನಾಯಕರಾಗಿರುವ ಅವರಿಗೆ ಕಾಂಗ್ರೆಸ್ ಪಕ್ಷದ ಮೇಲೆ ಯಾವುದೇ ಹಿಡಿತ ಇಲ್ಲ. ಕಾಂಗ್ರೆಸ್‌ನಲ್ಲಿಯೇ ಅನೇಕ ಬಣಗಳಾಗಿವೆ. ಸಿದ್ದರಾಮಯ್ಯ ಬಣ, ಜೆಡಿಎಸ್‌ನಿಂದ ಬಂದವರ ಬಣ, ಪರಮೇಶ್ವರ್ ಬಣ, ಡಿ.ಕೆ.ಶಿವಕುಮಾರದ್ದು ಬೇರೆಯೇ ಬಣಗಳಿವೆ. ಈ ಬಣಗಳನ್ನು ನಿಭಾಯಿಸಲಾಗದೆ ಅವರು ಬಾಯಿಗೆ ಬಂದಾಗೆ ಮಾತನಾಡುತಿದ್ದರು ಎಂದು ಅವರು ಟೀಕಿಸಿದರು.

ಜೆಡಿಎಸ್‌ನವರು ಯಾರೂ ಕೂಡ ನಮ್ಮ ಸಂಪರ್ಕದಲ್ಲಿ ಇಲ್ಲ. ಯಾವುದೇ ಶಾಸಕರು ಬಿಜೆಪಿಗೆ ಬರಬೇಕಾದರೆ ಮೊದಲು ಶಾಸಕಗಿರಿ ಬಿಡಬೇಕು. ಇದು ಮೊದಲಿನಿಂದಲೂ ನಮ್ಮ ನಿಲುವು ಆಗಿದೆ ಎಂದು ಅವರು ತಿಳಿಸಿದರು.

ಸಿದ್ದರಾಮಯ್ಯ ಐದು ವರ್ಷಗಳ ಕಾಲ ಯಾವ ರೀತಿ ಅಧಿಕಾರ ನಡೆಸಿದ್ದಾರೆ ಎಂಬುದು ಜನತೆ ನೋಡಿದ್ದಾರೆ. ಜಾತಿ, ಧರ್ಮವನ್ನು ಒಡೆಯುವ ಕೆಲಸ

ಮಾಡಿದ್ದಾರೆ. ಜಾತಿಗಳನ್ನು ಒಡೆದು ಅದರ ಲಾಭ ಪಡೆಯವ ಭ್ರಮೆಯಲ್ಲಿ ಅವರು ಇದ್ದಾರೆ. ಸಿದ್ದರಾಮಯ್ಯ ಕುತಂತ್ರ, ಷಡ್ಯಂತರ ರಾಜ್ಯದ ಜನತೆಗೆ ಅರ್ಥವಾಗಿದೆ. ಈ ಬಾರಿ ಯಾರೂ ಸಿದ್ದರಾಮಯ್ಯ ಕುತಂತ್ರಕ್ಕೆ ಬಲಿಯಾಗಲ್ಲ. ಸಿದ್ದರಾಮಯ್ಯನವರ ಕುರ್ಚಿ ಕುತಂತ್ರಕ್ಕೆ ಬಲಿಯಾಗಲ್ಲ ಎಂದು ಅವರು ಆರೋಪಿಸಿದರು.

ಡಿ.ಕೆ.ಶಿವಕುಮಾರ್ ಬಿಡುಗಡೆಯಿಂದ ಉಪ ಚುನಾವಣೆಯ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಡಿಕೆಶಿ ಇರುವಾಗಲೇ ವಿಧಾನಸಭಾ ಚುನಾವಣೆ ಆಗಿದೆ. ಆದರೂ ವಿಧಾಸಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಡಿಕೆಶಿ ಪ್ರಭಾವ ಇದ್ದರೂ ಕೂಡ 104 ಸ್ಥಾನಗಳನ್ನು ಗೆದ್ದಿದ್ದೇವೆ. ಕನಕಪುರದಲ್ಲಿ ಡಿಕೆಶಿ ಪ್ರಭಾವ ಇರಬಹುದು. ಆದರೆ ಇಡೀ ರಾಜ್ಯದಲ್ಲಿ ಎಲ್ಲೂ ಡಿಕೆಶಿ ಪ್ರಭಾವ ಇಲ್ಲ. ರಾಜ್ಯದ ಜನಕ್ಕೆ ಡಿಕೆಶಿ ಏನು ಎಂಬುದು ಅರ್ಥವಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News