ನ.1ರವರೆಗೆ ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ: ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Update: 2019-10-30 13:52 GMT

ಮಂಗಳೂರು, ಅ.30: ಅರಬ್ಬೀ ಸಮುದ್ರದಲ್ಲಿ ಕಾಣಿಸಿಕೊಂಡಿದ್ದ ‘ಕ್ಯಾರ್’ ಚಂಡಮಾರುತವು ಒಮನ್‌ನತ್ತ ದಿಕ್ಕು ಬದಲಿಸಿದರೂ ಕೂಡ ಬುಧವಾರ ಸಂಜೆಯಿಂದ ದ.ಕ.ಜಿಲ್ಲಾದ್ಯಂತ ಮತ್ತೆ ತನ್ನ ಪ್ರಭಾವ ತೋರಿಸಿದೆ. ಬುಧವಾರ ಅಪರಾಹ್ನದವರೆಗೆ ಬಿಸಿಲು, ಮೋಡ ಕವಿದ ವಾತಾವರಣವಿದ್ದರೂ ಕೂಡ ಸಂಜೆಯ ವೇಳೆಗೆ ಭಾರೀ ಮಳೆ ಸುರಿದಿದೆ. ನವೆಂಬರ್ 1ರವರೆಗೆ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರವಿವಾರದಿಂದ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಕಂಡಿದ್ದು, ಅದು ಚಂಡಮಾರುತವಾಗಿ ಮತ್ತೆ ಅರಬ್ಬೀ ಸಮುದ್ರದಲ್ಲಿ ತನ್ನ ಆರ್ಭಟ ತೋರ್ಪಡಿಸುವ ಸಾಧ್ಯತೆಯ ಬಗ್ಗೆ ಹವಾಮಾನ ಇಲಾಖೆ ಈಗಾಗಲೆ ಮುನ್ಸೂಚನೆ ನೀಡಿರುವುದನ್ನು ಗಮನಿಸಬಹುದಾಗಿದೆ.

ಬುಧವಾರ ಸುರಿದ ಮಳೆಯಿಂದಾಗಿ ಮೊದಲೇ ಹದಗೆಟ್ಟ ನಗರದ ಪ್ರಮುಖ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆಯಾಯಿತು. ನಗರದ ಸ್ಟೇಟ್‌ಬ್ಯಾಂಕ್,ಹಂಪನಕಟ್ಟೆ, ಜ್ಯೋತಿ, ಕಂಕನಾಡಿ, ಪಂಪ್‌ವೆಲ್, ತೊಕ್ಕೊಟ್ಟು ಮತ್ತಿತರ ಕಡೆ ರಸ್ತೆ ಸಂಚಾರಕ್ಕೆ ಅಡಚಣೆಯುಂಟಾಯಿತು. ನಗರದ ಪಡೀಲ್ ಅಂಡರ್‌ಪಾಸ್‌ನಲ್ಲಿ ಮಳೆ ನೀರು ಹರಿದು ಹೋಗಲಾಗದೆ ಸಂಚಾರಕ್ಕೆ ತೊಂದರೆಯಾಯಿತು. ದ್ವಿಚಕ್ರ ಸವಾರರು ಅತ್ತಿಂದಿತ್ತ ತೆರಳಲಾಗದೆ ಪರಿತಪಿಸಿದರು. ಪೊಲೀಸ್ ಇಲಾಖೆಯ ವಾಹನಕ್ಕೂ ರಸ್ತೆ ಬ್ಲಾಕ್‌ನ ಬಿಸಿ ತಗುಲಿತು. ಪಣಂಬೂರು ಎಂಸಿಎಫ್‌ನಿಂದ ಕೂಳೂರುವರೆಗೆ ರಸ್ತೆ ಬ್ಲಾಕ್ ಆಗಿದ್ದು, ವಾಹನಗಳು ಸಾಲು ಸಾಲಾಗಿ ನಿಂತಿದ್ದವು.

►ಮೀನುಗಾರರಿಗೆ ಎಚ್ಚರಿಕೆ: ಹವಾಮಾನ ಇಲಾಖೆಯು ನೀಡಿದ ಮುನ್ಸೂಚನೆಯಂತೆ ನವೆಂಬರ್ 1ರವರೆಗೆ ಅರಬ್ಬೀ ಸಮುದ್ರವು ಪ್ರಕ್ಷುಬ್ಧಗೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಸಂಭಾವ್ಯ ಅನಾಹುತವನ್ನು ತಡೆಯುವ ಸಲುವಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹಾಗೂ ಮೀನುಗಾರಿಕೆಗೆ ತೆರಳಿರುವ ಎಲ್ಲಾ ಮೀನುಗಾರಿಕಾ ದೋಣಿಗಳು ಕೂಡಲೇ ದಡ ಸೇರುವಂತೆ ಎಲ್ಲಾ ಮೀನುಗಾರರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ ಎಂದು ಮಂಗಳೂರು ಮೀನುಗಾರಿಕೆಯ ಉಪನಿರ್ದೇಶಕರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News