ಕಾಶ್ಮೀರದಲ್ಲಿ ಪ.ಬಂಗಾಳದ ಕಾರ್ಮಿಕರ ಹತ್ಯೆ ಪ್ರಕರಣ: ಸಮರ್ಥ ತನಿಖೆಗೆ ಮಮತಾ ಬ್ಯಾನರ್ಜಿ ಆಗ್ರಹ

Update: 2019-10-30 14:13 GMT

ಹೊಸದಿಲ್ಲಿ, ಅ.30: ಜಮ್ಮು ಮತ್ತು ಕಾಶ್ಮೀರದಲ್ಲಿ ಪಶ್ಚಿಮ ಬಂಗಾಳದ ಆರು ಮಂದಿ ಕಾರ್ಮಿಕರನ್ನು ಹತ್ಯೆ ಮಾಡಿರುವ ಘಟನೆಯ ಬಗ್ಗೆ ಸಮರ್ಥ ತನಿಖೆ ನಡೆಸಿದರೆ ಮಾತ್ರ ವಾಸ್ತವ ಸತ್ಯ ಹೊರಬೀಳಬಹುದು ಎಂದು ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಮೃತ ಕಾರ್ಮಿಕರ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಲು ಪಕ್ಷದ ಸಂಸದರು ಹಾಗೂ ಶಾಸಕರು ಮುರ್ಷಿದಾಬಾದ್‌ಗೆ ತೆರಳಿದ್ದಾರೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಪ.ಬಂಗಾಳದ ಹಿರಿಯ ಪೊಲೀಸ್ ಅಧಿಕಾರಿ ಸಂಜಯ್ ಸಿಂಗ್‌ರನ್ನು ನಿಯೋಜಿಸಲಾಗಿದೆ ಎಂದು ಟ್ವೀಟ್ ಮಾಡಿರುವ ಮಮತಾ, ಮೃತ ಕಾರ್ಮಿಕರ ಕುಟುಂಬದವರಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಈಗ ಜಮ್ಮು ಕಾಶ್ಮೀರದಲ್ಲಿ ರಾಜಕೀಯ ಚಟುವಟಿಕೆ ಸ್ತಬ್ಧವಾಗಿದ್ದು ಕಾನೂನು ಮತ್ತು ಸುವ್ಯವಸ್ಥೆ ಪ್ರಕ್ರಿಯೆಯನ್ನು ಕೇಂದ್ರ ಸರಕಾರವೇ ನಿರ್ವಹಿಸುತ್ತಿದೆ. ಆದ್ದರಿಂದ ಸಮರ್ಥ ತನಿಖೆ ನಡೆಸಿದರೆ ಮಾತ್ರ ವಾಸ್ತವ ಸತ್ಯ ಹೊರಬರುತ್ತದೆ ಎಂದವರು ಹೇಳಿದ್ದಾರೆ. ವಾಸ್ತವ ಸತ್ಯ ಎಂಬ ಪದದ ಬಗ್ಗೆ ಅವರು ವಿವರಣೆ ನೀಡಿಲ್ಲ. ಮಂಗಳವಾರ ದಕ್ಷಿಣ ಕಾಶ್ಮೀರದ ಕುಲ್ಗಾಂವ್‌ನ ಕಟ್ರಾಸೂ ಗ್ರಾಮದ ಮನೆಯೊಂದಕ್ಕೆ ನುಗ್ಗಿದ್ದ ನಾಲ್ವರು ಉಗ್ರರು, ಮನೆಯೊಳಗಿದ್ದ ಪಶ್ಚಿಮ ಬಂಗಾಲ ಮೂಲದ ಆರು ಮಂದಿ ಕಾರ್ಮಿಕರನ್ನು ಹೊರಗೆಳೆದು ತಂದು ಗುಂಡು ಹಾರಿಸಿ ಹತ್ಯೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News