×
Ad

ಬಂಟ್ವಾಳ ತಾಲೂಕಿನ ವಿವಿಧೆಡೆ ಭಾರೀ ಮಳೆ: ಮೂರು ಮನೆಗಳ ಗೋಡೆ ಕುಸಿತ

Update: 2019-10-30 20:10 IST

ಬಂಟ್ವಾಳ, ಅ. 30: ಮಂಗಳವಾರ ರಾತ್ರಿ ತಾಲೂಕಿನ ವಿವಿಧೆಡೆಯಲ್ಲಿ ಸಿಡಿಲಿನಬ್ಬರ, ಮಿಂಚು ಹಾಗೂ ಧಾರಾಕಾರ ಮಳೆಗೆ ಮೂರು ಮನೆಗಳ ಗೋಡೆ ಕುಸಿದು ಬಿದ್ದರೆ, ಎರಡು ಮನೆಗೆ ಸಿಡಿಲು ಬಡಿದು ಹಾನಿಯಾದ ಬಗ್ಗೆ ವರದಿಯಾಗಿದೆ.    

ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಕುರ್ಮಾನ್ ಗೋಪಿ ಪೂಜಾರಿ ಎಂಬವರ ಮನೆಯ ಗೋಡೆಯ ಒಂದು ಭಾಗ ಕುಸಿದು ಬಿದ್ದಿದೆ. ಮನೆಯ ಸದಸ್ಯರು ಊಟ ಮಾಡಿ ಮಲಗಿದ್ದ ವೇಳೆ ಈ ಘಟನೆ ನಡೆದಿದ್ದರೂ, ಯಾವುದೇ ಅಪಾಯ ಸಂಭವಿಸಿಲ್ಲ. ಸುದ್ದಿ ತಿಳಿದ ಬಂಟ್ವಾಳ ತಹಶೀಲ್ದಾರ್ ರಶ್ಮಿ. ಎಸ್.ಆರ್.ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ನಷ್ಟದ ಬಗ್ಗೆ ಅಂದಾಜಿಸಿದ್ದಾರೆ. ಸುಮಾರು 1.50 ಲಕ್ಷ ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.

ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾಜಿ ತಾಪಂ ಉಪಾಧ್ಯಕ್ಷ ದಿನೇಶ್ ಅಮ್ಟೂರು, ಮಾಜಿ ಜಿಪಂ ಸದಸ್ಯ ಚೆನ್ನಪ್ಪ ಕೋಟ್ಯಾನ್, ಗ್ರಾಪಂ ಅಧ್ಯಕ್ಷ ವಿಠಲ ನಾಯ್ಕ, ಬಿ.ಕೆ.ಅಣ್ಣುಪೂಜಾರಿ, ಕೃಷ್ಣಪ್ಪ ಆಚಾರ್ಯ, ಡಾ. ಪ್ರಭಾಕರ ಭಟ್ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಬಾಳ್ತಿಲ ಗ್ರಾಮದಲ್ಲಿ ಚಂದಪ್ಪ ಪೂಜಾರಿ ಅವರ ಕಚ್ಚಾ ಮನೆಗೆ ಹಾನಿಯಾಗಿದ್ದರೆ, ಸಜೀಪಮುನ್ನೂರು ಗ್ರಾಮದ ನಂದಾವರದಲ್ಲಿ ರಾಜೇಂದ್ರ ಅವರ ಮನೆಯ ಒಂದು ಭಾಗದಲ್ಲಿ ಕುಸಿದು ಬಿದ್ದಿದೆಯಲ್ಲದೆ ಹಂಚು, ರೀಪು ಮುರಿದಿದ್ದು, ಉಳಿದ ರೀಪುಗಳು ಮುರಿಯುವ ಸಾಧ್ಯತೆಯಿರುವುದರಿಂದ ಮನೆಯ ಸದಸ್ಯರನ್ನು ಸುರಕ್ಷಿತ ಸ್ಥಳಕ್ಕೆ ತೆರಳಲು ಆಗಲು ಸೂಚಿಸಲಾಗಿದೆ.

ಕುರಿಯಾಳ ಗ್ರಾಮದ ಚಂದ್ರಯ್ಯ ಆಚಾರಿ ಅವರ ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿಯಾಗಿದೆ. ಟಿ.ವಿ.ಗೆ ಹಾನಿಯಾಗಿದ್ದು, ವಿದ್ಯುತ್ ವಯರ್ ಕರಟಿಹೋಗಿದೆ. ವಿಟ್ಲ ಕಸಬಾ ಗ್ರಾಮದ ಗುಲಾಬಿ ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿಗೊಳಗಾಗಿದೆ. ಗುಡುಗು, ಮಿಂಚು, ಮಳೆಯ ಅಬ್ಬರಕ್ಕೆ ಬಂಟ್ವಾಳ, ಬಿ.ಸಿ.ರೋಡು ಸಹಿತ ವಿವಿಧೆಡೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News