ಟಿಪ್ಪು ಕುರಿತ ಪಠ್ಯ ತೆಗೆಯಲು ಚಿಂತನೆ: ಮುಖ್ಯಮಂತ್ರಿ ಹೇಳಿಕೆಗೆ ಶಾಸಕ ಖಾದರ್ ಆಕ್ರೋಶ

Update: 2019-10-30 14:56 GMT

ಮಂಗಳೂರು, ಅ.30:ಪಠ್ಯಪುಸ್ತಕಗಳಿಂದ ಟಿಪ್ಪು ಇತಿಹಾಸ ತೆರವುಗೊಳಿಸುವ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ನೀಡಿರುವ ಹೇಳಿಕೆಯ ಬಗ್ಗೆ ಮಾಜಿ ಸಚಿವ, ಹಾಲಿ ಶಾಸಕ ಯು.ಟಿ.ಖಾದರ್ ತೀವ್ರವಾಗಿ ಖಂಡಿಸಿದ್ದಾರೆ.

ಟಿಪ್ಪು ಸುಲ್ತಾನ್ ಕರ್ನಾಟಕಕ್ಕೆ ಮಾತ್ರ ಸೀಮಿತರಾದ ರಾಜನಲ್ಲ. ಅವರು ದೇಶ-ವಿದೇಶದಲ್ಲೂ ಪ್ರಖ್ಯಾತರಾದವರು. ಬಿಜೆಪಿ ನೇತೃತ್ವದ ರಾಜ್ಯ ಸರಕಾರವು ಪಠ್ಯಪುಸ್ತಕದಿಂದ ಟಿಪ್ಪು ಇತಿಹಾಸವನ್ನು ತೆಗೆದರೂ ಕೂಡ ಟಿಪ್ಪುವಿನ ಸಾಧನೆ, ಪರಾಕ್ರಮವನ್ನು ಮರೆಮಾಚಲು ಸಾಧ್ಯವೇ ಇಲ್ಲ. ಅಲ್ಲದೆ, ಸರಕಾರವು ಮತೀಯ ದ್ವೇಷದ ಭಾಗವಾಗಿ ಪಠ್ಯಪುಸ್ತಕದಿಂದ ಟಿಪ್ಪು ಇತಿಹಾಸವನ್ನು ತೆಗೆದರೆ ಅದರಿಂದ ಟಿಪ್ಪುವಿನ ಘನತೆಗೆ ಎಂದಿಗೂ ಧಕ್ಕೆಯಾಗದು ಎಂದು ಖಾದರ್ ತಿಳಿಸಿದ್ದಾರೆ.

ರಾಜ್ಯದ ಪಠ್ಯಪುಸ್ತಕದಿಂದ ಟಿಪ್ಪು ಸುಲ್ತಾನ್‌ರ ಇತಿಹಾಸದ ಪುಠಗಳನ್ನು ತೆರವುಗೊಳಿಸುವ ಬಿಜೆಪಿ ಸರಕಾರವು ಇಂಗ್ಲೆಂಡಿನ ಮ್ಯೂಸಿಯಂನಲ್ಲಿರುವ ಟಿಪ್ಪು ಸ್ಮರಣಾರ್ಥದ ಪರಿಕರಗಳು, ಇತಿಹಾಸದ ಬರಹಗಳನ್ನು ತೆಗೆಸಲು ಸಾಧ್ಯವೇ ಎಂದು ಖಾದರ್ ಪ್ರಶ್ನಿಸಿದ್ದಾರೆ. ಸರಕಾರವು ತನ್ನ ಸಣ್ಣತನವನ್ನು ಕೈ ಬಿಡಬೇಕು ಎಂದು ಆಗ್ರಹಿಸಿದ್ದಾರೆ.

ಜಯಂತಿ ಎಂಬುದು ಇಸ್ಲಾಮ್ ಧರ್ಮದಲ್ಲಿಲ್ಲ. ಆದರೆ ಟಿಪ್ಪು ಸುಲ್ತಾನ್‌ನ ಅಭಿಮಾನಿಗಳು ಅಲ್ಲಲ್ಲಿ ಟಿಪ್ಪುವಿನ ಸಾಧನೆಗಳನ್ನು ಮೆಲುಕು ಹಾಕುವ ಪ್ರಯತ್ನ ಮಾಡುತ್ತಿದ್ದರು. ಹೀಗಿರುವಾಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅದನ್ನು ಸರಕಾರಿ ಕಾರ್ಯಕ್ರಮವನ್ನು ಮಾಡಿತ್ತು. ಆವಾಗಲೇ ಬಿಜೆಪಿ ಟಿಪ್ಪು ಜಯಂತಿಗೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಇದೀಗ ಅಧಿಕಾರದಲ್ಲಿರುವ ಬಿಜೆಪಿಯು ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸಿರುವುದು ಸಹಜ. ಮುಖ್ಯಮಂತ್ರಿ ಯಡಿಯೂರಪ್ಪ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸಿ ಪಠ್ಯದಿಂದ ಟಿಪ್ಪು ಚರಿತ್ರೆಯನ್ನು ಕೈ ಬಿಡುವ ಬಗ್ಗೆ ಪ್ರಸ್ತಾಪಿಸಿರುವುದು ಆಶ್ಚರ್ಯ. ಯಾಕೆಂದರೆ ಇದೇ ಯಡಿಯೂರಪ್ಪ ಬಿಜೆಪಿಯಿಂದ ಹೊರ ನಡೆದು ಕೆಜೆಪಿ ಕಟ್ಟಿದಾಗ ಟಿಪ್ಪು ಜಯಂತಿ ಆಚರಿಸಿದ್ದರು. ಪಕ್ಷಾಂತರಗೊಂಡಾಗ ಟಿಪ್ಪು ಬಗ್ಗೆ ದ್ವಂದ ನಿಲುವು ತಾಳುವ ಮುಖ್ಯಮಂತ್ರಿಯ ನಡೆಯು ಪ್ರಶ್ನಾರ್ಹವಾಗಿದ್ದು, ಈ ಬಗ್ಗೆ ತನ್ನ ಹೇಳಿಕೆಯನ್ನು ಮುಖ್ಯಮಂತ್ರಿ ಪರಿಶೀಲಿಸುವುದು ಒಳಿತು ಎಂದು ಮಂಗಳೂರು ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲಿ ಹಸನ್ ತಿಳಿಸಿದ್ದಾರೆ.

ಇತಿಹಾಸ ಪುರುಷ ಟಿಪ್ಪು ಸುಲ್ತಾನ್‌ರ ಸಾಧನೆ ಅಪಾರ. ಜಗತ್ತೇ ಟಿಪ್ಪುವಿನ ಸಾಧನೆಯನ್ನು ಕೊಂಡಾಡಿದೆ. ಹೀಗಿರುವಾಗ ರಾಜ್ಯ ಬಿಜೆಪಿ ಸರಕಾರವು ಟಿಪ್ಪುವಿನ ಇತಿಹಾಸದ ಪುಟಗಳನ್ನು ಪಠ್ಯಪುಸ್ತಕದಿಂದ ಕೈ ಬಿಡಲು ಮುಂದಾಗಿರುವುದು ಖಂಡನೀಯ ಎಂದು ದ.ಕ.ಜಿಲ್ಲಾ ಟಿಪ್ಪು ಸುಲ್ತಾನ್ ಅಭಿಮಾನಿಗಳ ವೇದಿಕೆಯ ಅಧ್ಯಕ್ಷ ಇಸ್ಮಾಯೀಲ್ ಶಾಫಿ ಬಬ್ಬುಕಟ್ಟೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News