ನೂರ್ ಶ್ರೀಧರ್ ನಾಲ್ಕನೆ ಪ್ರಕರಣದಿಂದಲೂ ದೋಷಮುಕ್ತ
ಉಡುಪಿ, ಅ.30: ಕಳೆದ 12ವರ್ಷಗಳ ಹಿಂದೆ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭೋಜ ಶೆಟ್ಟಿ ಎಂಬವರ ಮೇಲೆ ನಕ್ಸಲೀಯರು ನಡೆಸಿರುವ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ನೂರ್ ಶ್ರೀಧರ್ ಅವರನ್ನು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ಖುಲಾಸೆಗೊಳಿಸಿದ್ದು, ಈ ಮೂಲಕ ನೂರ್ ಶ್ರೀಧರ್ ತನ್ನ ವಿರುದ್ಧ ಇದ್ದ ಎಲ್ಲ ನಾಲ್ಕೂ ಪ್ರಕರಣಗಳಿಂದ ದೋಷ ಮುಕ್ತರಾಗಿದ್ದಾರೆ.
2006ರ ಮೇ 13ರಂದು ನಾಡ್ಪಾಲು ಸೀತಾನದಿ ಬಾಳೆಬ್ಬಿ ಎಂಬಲ್ಲಿ ಭೋಜ ಶೆಟ್ಟಿ ಎಂಬವರ ಮನೆಗೆ ಅಕ್ರಮ ಪ್ರವೇಶಿಸಿದ ನಕ್ಸಲೀಯರು ಭೋಜ ಶೆಟ್ಟಿಗೆ ಜೀವ ಬೆದರಿಕೆ ಹಾಕಿ, ಬಂದೂಕುಗಳಿಂದ ಗುಂಡು ಹಾರಿಸಿ ಕೊಲೆಗೆ ಯತ್ನಿಸಿರುವುದಲ್ಲದೆ ಅವಹೇಳನಕಾರಿ ಕರಪತ್ರವನ್ನು ಮನೆಯೊಳಗೆ ಬಿಸಾಡಿ ಕಾಡಿನೊಳಗೆ ಓಡಿ ಪರಾರಿಯಾಗಿದ್ದರು ಎಂದು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ನೂರ್ ಶ್ರೀಧರ್ ವಿರುದ್ಧವೂ ದೋಷರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಎಂ.ಜೋಶಿ ಆರೋಪಿಯನ್ನು ದೋಷಮುಕ್ತಗೊಳಿಸಿ ಆದೇಶ ನೀಡಿದರು. ಆರೋಪಿ ಪರವಾಗಿ ನ್ಯಾಯವಾದಿ ಶಾಂತಾರಾಮ್ ಶೆಟ್ಟಿ ವಾದಿಸಿದ್ದರು.
ಭೂಗತರಾಗಿದ್ದ ನೂರ್ ಶ್ರೀಧರ್ 2013-14ರ ಅವಧಿಯಲ್ಲಿ ಸರಕಾರದ ಜೊತೆಗಿನ ಮಾತುಕತೆಯಿಂದ ಮುಖ್ಯವಾಹಿನಿಗೆ ಮರಳಿದ್ದರು. ಆಗ ಒಂದು ತಿಂಗಳ ಕಾಲ ಜೈಲಿನಲ್ಲಿದ್ದ ಅವರು 2015ರ ಜ.15ರಂದು ಬಿಡುಗಡೆ ಹೊಂದಿದ್ದರು. ನಂತರ ಇವರ ಮೇಲೆ ನಾಲ್ಕು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದವು.
ಇವುಗಳಲ್ಲಿ ಚಿಕ್ಕಮಗಳೂರು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ಎರಡು ಪ್ರಕರಣಗಳಲ್ಲಿ ಅವರು ಒಂದು ವರ್ಷದ ಹಿಂದೆ ದೋಷಮುಕ್ತರಾಗಿದ್ದರು. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ತಿಂಗಳ ಹಿಂದೆ ಇವರನ್ನು ಉಡುಪಿ ನ್ಯಾಯಾಲಯ ದೋಷಮುಕ್ತಗೊಳಿಸಿತ್ತು. ಇದೀಗ ನಾಲ್ಕನೆ ಹಾಗೂ ಕೊನೆಯ ಪ್ರಕರಣದಲ್ಲೂ ಕೂಡ ಅವರು ದೋಷಮುಕ್ತರಾಗಿದ್ದಾರೆ.