ಅಯೋಧ್ಯೆ ತೀರ್ಪು ಪ್ರಕಟ ಹಿನ್ನೆಲೆ: ನವೆಂಬರ್ ನ ಎಲ್ಲಾ ಕಾರ್ಯಕ್ರಮ ರದ್ದುಗೊಳಿಸಿದ ಆರೆಸ್ಸೆಸ್

Update: 2019-10-30 17:13 GMT

ಲಕ್ನೊ, ಅ.30: ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನವೆಂಬರ್ 17ರಂದು ತೀರ್ಪು ಪ್ರಕಟಿಸುವ ನಿರೀಕ್ಷೆಯಿದ್ದು, ನವೆಂಬರ್ ತಿಂಗಳಿನಲ್ಲಿ ಆಯೋಜಿಸಿರುವ ಎಲ್ಲಾ ಪ್ರವಾಸ ಕಾರ್ಯಕ್ರಮ ರದ್ದುಗೊಳಿಸುವಂತೆ ಆರೆಸ್ಸೆಸ್ ತನ್ನ ಕಾರ್ಯಕರ್ತರಿಗೆ ಸೂಚಿಸಿದೆ.

ನವೆಂಬರ್ ತಿಂಗಳಿನಲ್ಲಿ ಪಕ್ಷ ಹಮ್ಮಿಕೊಂಡಿರುವ ಎಲ್ಲಾ ಕಾರ್ಯಕ್ರಮಗಳನ್ನೂ ರದ್ದುಗೊಳಿಸಲಾಗಿದೆ. ಕಾರ್ಯಕರ್ತರೂ ತಮ್ಮ ಎಲ್ಲಾ ಪ್ರವಾಸ ಕಾರ್ಯಕ್ರಮ ರದ್ದುಗೊಳಿಸಬೇಕು. ತೀರ್ಪು ಪ್ರಕಟವಾದ ಬಳಿಕ ಏನಾದರೂ ನಡೆದರೆ ಅದಕ್ಕೆ ಸಂಘಟನೆಯನ್ನು ದೂಷಿಸಬಾರದು ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಆರೆಸ್ಸೆಸ್ ಮೂಲಗಳು ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಹರಿದ್ವಾರದಲ್ಲಿ ಅ.31ರಿಂದ ನವೆಂಬರ್ 4ರವರೆಗೆ ನಡೆಯಬೇಕಿದ್ದ ಉನ್ನತ ಸಮಾವೇಶವನ್ನು ಮುಂದೂಡಲಾಗಿದೆ. ಐದು ವರ್ಷಕ್ಕೊಮ್ಮೆ ನಡೆಯುವ ಈ ಸಮಾವೇಶದಲ್ಲಿ ಸಂಘಟನೆಯ ಉನ್ನತ ಮುಖಂಡರು ಪಾಲ್ಗೊಳ್ಳುತ್ತಾರೆ.

ಜೊತೆಗೆ, ನವೆಂಬರ್ 17ರಂದು ಲಕ್ನೊದಲ್ಲಿ ನಿಗದಿಯಾಗಿದ್ದ ‘ಏಕಲ್ ಪರಿವರ್ತನಾ ಕುಂಭ್’ ಕಾರ್ಯಕ್ರಮವನ್ನು, ನವೆಂಬರ್ 4ರಂದು ಅಯೋಧ್ಯೆಯಲ್ಲಿ ನಿಗದಿಯಾಗಿದ್ದ ದುರ್ಗಾವಾಹಿನಿ ಶಿಬಿರವನ್ನು ರದ್ದುಗೊಳಿಸಲಾಗಿದೆ.

ಮುಂದಿನ ಸೂಚನೆ ಬರುವವರೆಗೆ ತಮ್ಮ ಮೂಲ ಸ್ಥಳದಲ್ಲೇ ಇರುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ ಎಂದು ಆರೆಸ್ಸೆಸ್ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News