ವರದಿಯಾಗದ 5.5 ಲಕ್ಷ ಕ್ಷಯರೋಗ ಪ್ರಕರಣಗಳ ಗುರುತಿಸಲು ಪ್ರಯತ್ನ: ಅಶ್ವಿನಿ ಕುಮಾರ್ ಚೌಬೆ

Update: 2019-10-30 15:51 GMT

ಹೈದರಾಬಾದ್, ಅ. 30: ಸರಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಸೌಲಭ್ಯ ವಿಸ್ತರಿಸಲು ಭಾರತದಲ್ಲಿ ಕಳೆದ ವರ್ಷ ವರದಿಯಾಗದ 5.5 ಲಕ್ಷ ಕ್ಷಯ ರೋಗ ಪ್ರಕರಣಗಳನ್ನು ಗುರುತಿಸುವ ಪ್ರಯತ್ನ ನಡೆಯುತ್ತಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಖಾತೆಯ ಸಹಾಯಕ ಸಚಿವ ಅಶ್ವಿನಿ ಕುಮಾರ್ ಚೌಬೆ ಬುಧವಾರ ಹೇಳಿದ್ದಾರೆ.

 ಇಲ್ಲಿ ಕ್ಷಯರೋಗ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸುಮಾರು 21.5 ಕ್ಷಯ ರೋಗಿಗಳು ಇದ್ದಾರೆ. ಚಿಕಿತ್ಸೆಗೆ ಸರಕಾರದ ಯೋಜನೆ ಲಭ್ಯವಾಗುವಂತೆ ಅವರ ವಿವರಗಳನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಿಸಲಾಗುತ್ತಿದೆ ಎಂದರು. ನಮ್ಮ ದೇಶದಲ್ಲಿ 21.5 ಲಕ್ಷ ಕ್ಷಯ ರೋಗಿಗಳು ಇದ್ದಾರೆ. 5.5 ವರದಿಯಾಗದ ಪ್ರಕರಣಗಳು ಇರಬಹುದೆಂದು ನಾವು ಅಂದಾಜಿಸಿದ್ದೇವೆ ಎಂದು ಅವರು ಹೇಳಿದರು. ನಾವು ಕ್ಷಯ ರೋಗಿಗಳನ್ನು ಗುರುತಿಸಲು ಹಾಗೂ ಅವರ ವಿವರಗಳನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಿಸಲು ಪ್ರಯತ್ನಿಸುತ್ತಿದ್ದೇವೆ. ಇದರಿಂದ ಅವರು ಕೂಡ ಸರಕಾರದ ಉಚಿತ ಚಿಕಿತ್ಸೆಯ ಸೌಲಭ್ಯ ಪಡೆಯಬಹುದು ಎಂದು ಚೌಬೆ ಹೇಳಿದ್ದಾರೆ.

ಜಗತ್ತಿನಿಂದ ಕ್ಷಯ ರೋಗ ನಿರ್ಮೂಲನೆಗೊಳಿಸಲು ವಿಶ್ವ ಆರೋಗ್ಯ ಸಂಸ್ಥೆ 2030 ಗಡು ನೀಡಿದೆ. ಆದರೂ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಕ್ಷಯ ರೋಗವನ್ನು 2025ರ ಒಳಗೆ ನಿರ್ಮೂಲನೆಗೊಳಿಸುವ ಪಣ ತೊಟ್ಟಿದ್ದಾರೆ ಎಂದರು. ರಾಜ್ಯಗಳ ಸಹಕಾರ ಕೋರಿದ ಚೌಬೆ, ದೇಶದಿಂದ ಕ್ಷಯ ರೋಗ ನಿರ್ಮೂಲನೆಗೊಳಿಸಲು ಕೈಜೋಡಿಸುವಂತೆ ಹಾಗೂ ಸಂಘಟಿತವಾಗಿ ಕಾರ್ಯ ನಿರ್ವಹಿಸುವಂತೆ ಕೋರಿ ಎಲ್ಲ ರಾಜ್ಯ ಸರಕಾರಗಳಿಗೆ ಪತ್ರ ಬರೆಯಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News