ಮನಪಾ 58 ವಾರ್ಡ್‌ಗಳ ಅಭ್ಯರ್ಥಿಗಳ ಆಯ್ಕೆ ಪೂರ್ಣ: ಸುದರ್ಶನ್

Update: 2019-10-30 16:11 GMT

ಮಂಗಳೂರು,ಅ,30:ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾರ್ಡ್‌ಗಳಲ್ಲಿ 30 ಹೊಸ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ. ಈ ಹಿಂದೆ ಆಯ್ಕೆಯಾಗಿದ್ದ ಮನಪಾ ಸದಸ್ಯರಲ್ಲಿ 19 ಮಂದಿಗೆ ಮತ್ತೆ ಸ್ಪರ್ಧಿಸಲು ಅವಕಾಶ ನೀಡಲಾಗಿದೆ ಎಂದು ಆಯ್ಕೆಗಾಗಿ ಆಗಮಿಸಿದ ಕೆಪಿಸಿಸಿ ನಾಯಕರಾದ ಸುದರ್ಶನ್ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಮನಪಾ ವ್ಯಾಪ್ತಿಯ ಒಟ್ಟು 60 ವಾರ್ಡ್‌ಗಳಲ್ಲಿ ಎರಡು ಕ್ಷೇತ್ರಗಳನ್ನು ಹೊರತು ಪಡಿಸಿ ಉಳಿದ ಕಡೆಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿದೆ ಎಂದು ಸುದರ್ಶನ್ ತಿಳಿಸಿದ್ದಾರೆ. ಮಂಗಳೂರು ಮಹಾ ನಗರ ಪಾಲಿಕೆಯಲ್ಲಿ 2007ನ್ನು ಹೊರತು ಪಡಿಸಿ ಉಳಿದ ಎಲ್ಲಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿದೆ. ಈ ಬಾರಿಯೂ ಪಕ್ಷಕ್ಕೆ ಪೂರಕವಾದ ವಾತವರಣವಿದೆ ಎಂದು ಸುದರ್ಶನ್ ತಿಳಿಸಿದ್ದಾರೆ.

ಮಾಜಿ ಪ್ರಧಾನಿ ದಿ.ರಾಜೀವ ಗಾಂಧಿಯವರ ಕಾಲದಲ್ಲಿ ಸಂವಿಧಾನದ 73 ಮತ್ತು 74 ತಿದ್ದುಪಡಿಯ ಪರಿಣಾಮವಾಗಿ ರಾಜ್ಯದಲ್ಲಿ ಸ್ಥಳೀಯಾಡಳಿತಕ್ಕೆ ಸೂಕ್ತ ಕಾಲದಲ್ಲಿ ಚುನಾವಣೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯುವಂತಾಗಿದೆ. ಸಮಾಜದ ವಿವಿಧ ವರ್ಗಗಳಿಗೆ ಮೀಸಲಾತಿ, ಮಹಿಳೆಯರಿಗೆ ಶೇ 50ರಷ್ಟು ಮಿಸಲಾತಿ ದೊರೆಯುತ್ತಿರುವುದು ಕಾಂಗ್ರೆಸ್ ಪಕ್ಷದ ದೂರದೃಷ್ಟಿಯ ಫಲವಾಗಿದೆ ಎಂದು ಸುದರ್ಶನ್ ತಿಳಿಸಿದ್ದಾರೆ.

ರಾಜ್ಯದಲ್ಲಿ ನ.12ರಂದು ನಡೆಯಲಿರುವ 14 ಸ್ಥಳಿಯಾಡಳಿತ ಚುನಾವಣೆಯಲ್ಲಿಯೂ ಕಾಂಗ್ರೆಸ್‌ಗೆ ಪೂರಕವಾತವರಣವಿದೆ. ಒಂದೆರಡು ದಿನಗಳಲ್ಲಿ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆಯಾಗಲಿದೆ. ಮನಪಾ ವ್ಯಾಪ್ತಿಯಲ್ಲಿ ಕಾಂಗ್ರಸ್ ಆಡಳಿತದಲ್ಲಿದ್ದ ಕಾಲದಲ್ಲಿ ಮಾಡಲಾದ ಅಭಿವೃದ್ಧಿ ಕಾರ್ಯಕ್ರಮಗಳು ಈ ಬಾರಿ ಪಕ್ಷದ ಗೆಲುವಿಗೆ ಪೂರಕವಾಗಲಿದೆ ಎಂದು ಸುದರ್ಶನ್ ತಿಳಿಸಿದ್ದಾರೆ.

ಟಿಕೆಟ್ ಆಕಾಂಕ್ಷಿಗಳು ತಮ್ಮ ಅಸಮಧಾನವನ್ನು ಪಕ್ಷದ ಮುಖಂಡರ ಸಮ್ಮುಖದಲ್ಲಿ ತೋರ್ಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸುದರ್ಶನ ಅತೃಪ್ತರಿಗೆ ಸೂಕ್ತ ರೀತಿಯಲ್ಲಿ ಮನವರಿಕೆ ಮಾಡಿಕೊಡಲಾಗುವುದು. ಅವಕಾಶಗಳಿದ್ದಾಗ ಅವರಿಗೆ ಸೂಕ್ತ ಜವಾಬ್ದಾರಿಯನ್ನು ಹಂಚುವ ಮೂಲಕ ಅತೃಪ್ತಿಯ ಶಮನಕ್ಕೆ ಯತ್ನಿಸುವುದಾಗಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಮುಖಂಡರಾದ ವೆಂಕಟೇಶ್, ಸವಿತಾ ರಮೇಶ್, ಗೋಪಾಲ ಸ್ವಾಮಿ, ಮಾಜಿ ಸಚಿವ ಬಿ.ರಮಾನಾಥ ರೈ, ಶಾಸಕ ಯು.ಟಿ.ಖಾದರ್, ಐವನ್ ಡಿಸೋಜ, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಮೊಹಿಯುದ್ದೀನ್ ಬಾವ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಇತರ ಪದಾಧಿಕಾರಿಗಳಾದ ಶಾಲೆಟ್ ಪಿಂಟೊ, ಮಿಥುನ್ ರೈ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News