ಪ್ರಧಾನಿ ಮೋದಿಯಿಂದ ಬಂಡವಾಳಶಾಹಿಗಳಿಗೆ ದೇಶ ಮಾರಾಟ: ಡಾ.ಶ್ರೀನಿವಾಸ ಕಕ್ಕಿಲ್ಲಾಯ

Update: 2019-10-31 11:28 GMT

ಮಂಗಳೂರು, ಅ.31: ಸ್ವಾತಂತ್ರ ಬಂದು ನಾಲ್ಕು ವರ್ಷ ನಾಲ್ಕು ತಿಂಗಳಲ್ಲಿ ಮಂಗಳೂರು ವಿಮಾನ ನಿಲ್ದಾಣವನ್ನು ಅಂದಿನ ಪ್ರಧಾನಿ ಜವಾಹರ ಲಾಲ್ ನೆಹರೂ ಕಟ್ಟಿಸಿದ್ದರು. ಆದರೆ ಇದೀಗ ಪ್ರಧಾನಿ ನರೇಂದ್ರ ಮೋದಿ ನಾಲ್ಕು ವರ್ಷ 9 ತಿಂಗಳಲ್ಲಿ ಆ ವಿಮಾನ ನಿಲ್ದಾಣವನ್ನು ಅದಾನಿ ಗ್ರೂಪ್‌ಗೆ ನೀಡಿದ್ದಾರೆ ಎಂದು ಖ್ಯಾತ ವೈದ್ಯ ಹಾಗೂ ಚಿಂತಕ ಡಾ.ಬಿ.ಶ್ರೀನಿವಾಸ ಕಕ್ಕಿಲ್ಲಾಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ)ನ ಶತಮಾನ ಸಂಭ್ರಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ವಿಮಾನ ನಿಲ್ದಾಣದ ಜತೆಗೆ ರೈಲು ನಿಲ್ದಾಣ, ವಿದ್ಯುಚ್ಛಕ್ತಿ ಕಂಪೆನಿಗಳು, ಬಿಎಸ್ಸೆನ್ನೆಲ್, ಬ್ಯಾಂಕ್‌ಗಳನ್ನು ಒಂದೊಂದಾಗಿ ಖಾಸಗೀಕರಣಗೊಳಿಸುವ ಮೂಲಕ ಪ್ರಧಾನಿ ಮೋದಿ ಸರಕಾರ ದೇಶದ ಇಂಚು ಇಂಚನ್ನು ಇಲ್ಲಿನ ಬಂಡವಾಳಶಾಹಿಗಳಿಗೆ ಹಾಗೂ ವಿದೇಶಿ ಕಂಪೆನಿಗಳಿಗೆ ಮಾರಾಟಕ್ಕೆ ಮುಂದಾಗಿದೆ. ನಮ್ಮ ದೇಶದ ಹಿಂದಿನ ನಾಯಕರ ದೂರದೃಷ್ಟಿತ್ವದಿಂದ ಸ್ಥಾಪಿಸಿದ ಸರಕಾರಿಸ್ವಾಮ್ಯದ ಈ ವ್ಯವಸ್ಥೆಗಳು ಇಂದು ಬಂಡವಾಳಶಾಹಿಗಳ ಪಾಲಾಗುವುದನ್ನು ನಾವು ನೋಡಬೇಕಾಗಿರುವುದು ದುರಂತ ಎಂದವರು ಹೇಳಿದರು.

ಅದಾನಿಯು ಮಂಗಳೂರು ನಿಲ್ದಾಣದ ಹೆಸರನ್ನು ಮಂಗಳೂರು ಅಂತಾರಾಷ್ಟ್ರೀಯ ಅದಾನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಬದಲಾವಣೆ ಮಾಡುತ್ತಾರೆಂಬ ಮಾತುಗಳು ಕೇಳಿ ಬರುತ್ತಿವೆ. ಈ ಮಾರಾಟದ ವಿರುದ್ಧ ಹೋರಾಟ ಮಾಡುತ್ತಿರುವ ಪ್ರಮುಖ ಕಾರ್ಮಿಕ ಶಕ್ತಿ ಎಐಟಿಯುಸಿ. ಒಂದು ಕಾಲಕ್ಕೆ ದೇಶದ ನಂಬರ್ 1 ಕಾರ್ಮಿಕ ಸಂಘಟನೆಯಾಗಿತ್ತು. ಆದರೆ ಈಗ ಈ ದೇಶದ ಸ್ವಾತಂತ್ರ ಸಂಗ್ರಾಮಕ್ಕೆ ಯಾವುದೇ ಹೋರಾಟ ಮಾಡದೆ ಬ್ರಿಟಿಷರ ಏಜೆಂಟ್ ಆಗಿ ಕೆಲಸ ಮಾಡಿದ ಆರೆಸ್ಸೆಸ್ ಮತ್ತು ಬಿಜೆಪಿಯ ಸಂಘಟನೆ ಸದಸ್ಯತ್ವದ ನೆಲೆಯಲ್ಲಿ ನಂಬರ್ ವನ್ ಕಾರ್ಮಿಕ ಸಂಘಟನೆಯಾಗಿರುವುದು ನಮ್ಮ ದೇಶದ ದಿಕ್ಕು ಯಾವ ಕಡೆಗಿದೆ ಎಂಬುದನ್ನು ಸೂಚಿಸುತ್ತದೆ ಎಂದವರು ಹೇಳಿದರು.

ತಮ್ಮ ಹಕ್ಕುಗಳಿಗೆ ಹೋರಾಟ ಮಾಡಬೇಕಾಗಿದ್ದ ಕಾರ್ಮಿಕರನ್ನು ಧರ್ಮ, ಜಾತಿ, ಮತ ಹೆಸರಿನಲ್ಲಿ ಒಡೆದು ಬ್ರಿಟಿಷರ ಪರವಾಗಿ ಕೆಲಸ ಮಾಡುವ ಕಾರ್ಮಿಕ ಸಂಘಟನೆ ಇಂದು ಅತ್ಯಂತ ಹೆಚ್ಚು ಸದಸ್ಯತ್ವವನ್ನು ಹೊಂದಿರುವುದು ಈ ದೇಶದ ದುರಂತ ಎಂದವರು ಹೇಳಿದರು.

ನಗರದ ಬಿಜೈಯ ಕರ್ಣಾಟಕ ಬ್ಯಾಂಕ್ ನೌಕರರ ಸಂಘದ ಸಭಾಂಗಣದಲ್ಲಿ ನಡೆದ ಎಐಟಿಯುಸಿ ಸ್ಥಾಪಕ ದಿನಾಚರಣೆಯಲ್ಲಿ ದ.ಕ. ಮತ್ತು ಉಡುಪಿ ಜಿಲ್ಲಾಧ್ಯಕ್ಷ ಎಐಟಿಯುಸಿ ಕೆ.ವಿ. ಭಟ್ ಅಧ್ಯಕ್ಷತೆ ವಹಿಸಿದ್ದರು. ಎಐಟಿಯುಸಿ ರಾಜ್ಯ ನಾಯಕರಾದ ಬಿ. ಅಮ್ಜದ್, ಮಾಜಿ ಜಿಲ್ಲಾಧ್ಯಕ, ವಿ. ಕುಕ್ಯಾನ್, ಕೋಶಾಧಿಕಾರಿ ಎ. ಪ್ರಭಾಕರ ರಾವ್, ಕಾರ್ಯದರ್ಶಿ ಎಚ್.ವಿ. ರಾವ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News