ಟಿಪ್ಪು ಪಠ್ಯ ತೆಗೆಯುವ ಆದೇಶ ಸ್ವಾಗತಾರ್ಹ: ನಳಿನ್ ಕುಮಾರ್ ಕಟೀಲ್

Update: 2019-10-31 12:42 GMT

ಪಡುಬಿದ್ರಿ: ಟಿಪ್ಪು ಮತಾಂಧ, ದುರಂಹಕಾರಿಯಾಗಿದ್ದ. ಆತನ ಇತಿಹಾಸ ಮಕ್ಕಳಿಗೆ ಕಲಿಸುವುದು ಈ ದೇಶದ ಸಂಸ್ಕೃತಿಯಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಪಠ್ಯದಿಂದ ತೆಗೆಯಲು ಆದೇಶಿಸಲಾಗಿರುವ ಅವರ ನಿರ್ಧಾರ ಸ್ವಾಗತಾರ್ಹ ಎಂಬುದಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಹೆಜಮಾಡಿಯಲ್ಲಿ ಗುರುವಾರ ಪತ್ರಕರ್ತರೊಂದಿಗೆ ನಳಿನ್ ಮಾತನಾಡಿ, ರಾಜಕಾರಣಕ್ಕಾಗಿ ಟಿಪ್ಪುವನ್ನು ವೈಭವೀಕರಿಸಿದ್ದ ಈ ಹಿಂದಿನ ರಾಜ್ಯ ಸರಕಾರಗಳ ನಿರ್ಧಾರಗಳು ತಪ್ಪಾಗಿದ್ದವು. ಇಸ್ಲಾಂ ಧರ್ಮದಲ್ಲಿ ಜನ್ಮದಿನಾಚರಣೆ ಇಲ್ಲ. ಅಲ್ಲದೆ ಇದು ಬಹುಸಂಖ್ಯಾತರ ಭಾವನೆಗಳಿಗೆ ನೋವಾಗಿತ್ತು. ಮಂಗಳೂರು ನಗರದಲ್ಲಿನ 'ನೆತ್ತರಕೆರೆ ಪ್ರದೇಶ'ವು ಟಿಪ್ಪುವು ಕ್ರೈಸ್ತರನ್ನು ದಮನಿಸಿದ್ದ ನೆತ್ತರ ಕಥೆಯನ್ನು ಹೇಳುತ್ತಿದ್ದು, ಕ್ರೈಸ್ತರೂ ಟಿಪ್ಪುವನ್ನು ವಿರೋಧಿಸುತ್ತಿದ್ದಾರೆ ಎಂದು ಹೇಳಿದರು. 

ಎನ್ಎಂಪಿಟಿ ಬಳಿಯಲ್ಲಿನ ಡ್ರೆಜ್ಜರನ್ನು ತೆರವುಗೊಳಿಸದೆ ಇರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಳಿನ್ ಕುಮಾರ್, 10 ದಿನಗಳೊಳಗಾಗಿ ತೆರವುಗೊಳಿಸುವಂತೆ ಸೂಚಿಸಲಾಗಿದೆ. ಇಲ್ಲದಿದ್ದಲ್ಲಿ ಅದರಿಂದ ಮೀನಗಾರರಿಗೂ ತೊಂದರೆಯಾಗಲಿದೆ ತಿಳಿಸಿದರು.

ಮುಂಬರುವ ವಿಧಾನಸಭಾ ಉಪಚುನಾವಣೆಯಲ್ಲೂ ಬಿಜೆಪಿ 15 ಸ್ಥಾನಗಳನ್ನು ಗೆಲ್ಲಲಿದೆ. ರಾಜ್ಯದಲ್ಲಿ ಕೆಲ ನಗರಸಭೆ, ಮಹಾನಗರಪಾಲಿಕೆಗಳಿಗೆ ಚುನಾವಣೆ ನಡಿಯಲಿದೆ. ತಮ್ಮ ಪಕ್ಷದ ಸಿದ್ಧತೆಯು ಪೂರ್ಣಗೊಂಡಿದ್ದು, ಅತೀ ಹೆಚ್ಚು ಸ್ಥಾನವನ್ನು ಬಿಜೆಪಿ ಪಡೆಯಲಿದೆ. ಪಕ್ಷದ ಸಾಂಸ್ಥಿಕ ಚುನಾವಣೆಗಳೂ ಕಾರ್ಯಸೂಚಿಯಲ್ಲಿರುವಂತೆಯೇ ನ. 30ರೊಳಗಾಗಿ ಪೂರ್ತಿಗೊಳ್ಳಲಿದೆ ಎಂದರು. 

ಡಿಸೆಂಬರ್ ಗೆ ಹೆದ್ದಾರಿ ಕಾಮಗಾರಿ ಪೂರ್ಣ: ಕೇಂದ್ರ ಸಚಿವರಾದ ಸದಾನಂದ ಗೌಡ, ನಿತಿನ್ ಗಡ್ಕರಿ, ಸಂಸದೆ ಶೋಭಾ ಕರಂದ್ಲಾಜೆ ತಾನೂ ಸೇರಿದಂತೆ ಕೇಂದ್ರ ಸರ್ಕಾರದ ಅಧಿಕಾರಿಗಳು, ನವಯುಗ ಅಧಿಕಾರಿಗಳೊಂದಿಗೆ ಮಾತುಕತೆಯನ್ನು ನಡೆಸಲಾಗಿದೆ. ತೊಕೊಟ್ಟು, ಪಂಪ್ವೆಲ್, ಪಡುಬಿದ್ರಿ, ಕುಂದಾಪುರ ಮುಂತಾದೆಡೆಗಳಲ್ಲಿ ಕೆಲಸ ನಿಧಾನ ಗತಿಯಲ್ಲಿ ಸಾಗಿದೆ. ಡಿಸೆಂಬರ್ ತಿಂಗಳಾಂತ್ಯದೊಳಗಾಗಿ ಈ ಭಾಗದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವುದುದಾಗಿ ನವಯುಗ ನಿರ್ಮಾಣ ಕಂಪೆನಿಯು ಹೇಳಿರುವುದಾಗಿ ನಳಿನ್ ತಿಳಿಸಿದರು.

ಟೋಲ್ ವಿಸರ್ಜಿಸಲು ಒತ್ತಾಯ: ಸುರತ್ಕಲ್ ಟೋಲ್ಗೇಟನ್ನು ಒಂದೋ ವಿಸರ್ಜಿಸಬೇಕು ಅಥವಾ ಬೇರೆ ಟೋಲ್ನೊಂದಿಗೆ ಹೊಂದಾಣಿಕೆ ಮಾಡಬೇಕಿದೆ. ಅದು ಇರ್ಕಾನ್ ಕಂಪೆನಿ ಮತ್ತು ಎನ್ಎಚ್ಎಐಗಳಿಗೆ ಸೇರಿರುವುದರಿಂದ ಸಮಸ್ಯೆ ಎನಿಸಿದೆ. ಈಗಾಗಲೇ ಎನ್ಎಚ್ಎಐಗೆ ಪತ್ರ ಬರೆಯಲಾಗಿದೆ. ಅದನ್ನು ವಿಸರ್ಜಿಸಬೇಕಾಗಿ ನಾವೂ ಒತ್ತಾಯಿಸಿದ್ದೇವೆ. ಕಾರ್ಯ ಪ್ರಗತಿಯಲ್ಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News