ಚರಿತ್ರೆಯ ಪಠ್ಯಪುಸ್ತಕಗಳಲ್ಲಿ ರಾಮ, ಕೃಷ್ಣರ ಕುರಿತು ಅಧ್ಯಾಯಗಳಿರಬೇಕು: ಬಿಜೆಪಿ ಶಾಸಕ
ಬಲಿಯಾ (ಉ.ಪ್ರ), ಅ.31: ಮೊಘಲ್ ಮತ್ತು ಬ್ರಿಟಿಷ್ ಆಡಳಿತದ ಯುಗಗಳ ಚರಿತ್ರೆಯು ಗುಲಾಮಗಿರಿಯ ದಿನಗಳನ್ನು ನೆನಪಿಸುವುದರಿಂದ ಅವುಗಳನ್ನು ಪ್ರಾಥಮಿಕ ಮತ್ತು ಪ್ರೌಢಶಾಲಾ ಮಟ್ಟಗಳಲ್ಲಿ ಬೋಧಿಸಬಾರದು ಎಂದು ವಿವಾದಾತ್ಮಕ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಅವರು ಗುರುವಾರ ಇಲ್ಲಿ ಹೇಳಿದರು.
ಇವುಗಳ ಬದಲಿಗೆ ಶಿವಾಜಿ,ರಾಣಾ ಪ್ರತಾಪ,ರಾಮ,ಕೃಷ್ಣ,ಆರೆಸ್ಸೆಸ್‌ನ ಸ್ಥಾಪಕ ಕೆ.ಬಿ.ಹೆಡ್ಗೆವಾರ್ ಅವರ ಚರಿತ್ರೆಗಳನ್ನು ಮಕ್ಕಳಿಗೆ ಬೋಧಿಸಬೇಕು,ಇದರಿಂದ ಮಕ್ಕಳು ಅವರ ಬದುಕುಗಳಿಂದ ಸ್ಫೂರ್ತಿ ಪಡೆಯಲು ಸಾಧ್ಯವಾಗುತ್ತದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಿಂಗ್ ತಿಳಿಸಿದರು.
ಮೊಘಲ್ ಮತ್ತು ಬ್ರಿಟಿಷ್ ಯುಗದ ವಿದೇಶಿ ಆಕ್ರಮಣಕೋರರ ಚರಿತ್ರೆಯನ್ನು ಪದವಿ ಅಥವಾ ಸ್ನಾತಕೋತ್ತರ ಶಿಕ್ಷಣದ ಪಠ್ಯಕ್ರಮದಲ್ಲಿ ಸೇರಿಸಬಹುದು,ಆದರೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಟ್ಟದಲ್ಲಿ ಅದರ ಬೋಧನೆ ಒಳ್ಳೆಯದಲ್ಲ ಎಂದರು.
ವಿವಾದಾತ್ಮಕ ಹೇಳಿಕೆಗಳಿಗಾಗಿ ಹೆಸರಾಗಿರುವ ಸಿಂಗ್ ಈ ಹಿಂದೆ ವೈದ್ಯರನ್ನು ‘ರಾಕ್ಷಸರು’ ಮತ್ತು ಪತ್ರಕರ್ತರನ್ನು ‘ದಲ್ಲಾಳಿಗಳು ’ಎಂದು ಬಣ್ಣಿಸಿದ್ದರು.