×
Ad

12 ಗಂಟೆಗಳಲ್ಲೇ ಭದ್ರತೆಯನ್ನು ವಾಪಸ್ ಮಾಡಿದ ಮಾಲೆಗಾಂವ್ ಸ್ಫೋಟದ ಆರೋಪಿ

Update: 2019-10-31 19:34 IST

ಪುಣೆ, ಅ.31: ತನಗೆ ಯಾವುದೇ ಆದಾಯ ಮೂಲವಿಲ್ಲದ್ದರಿಂದ ತನಗೆ ನೀಡಲಾಗಿರುವ ಭದ್ರತೆಯ ವೆಚ್ಚವನ್ನು ಭರಿಸಲು ಸಾಧ್ಯವಿಲ್ಲ ಎಂದು 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿಗಳಲ್ಲೋರ್ವ ನಾಗಿರುವ ಸಮೀರ್ ಕುಲಕರ್ಣಿ ಪುಣೆ ಪೊಲೀಸರಿಗೆ ತಿಳಿಸಿದ್ದಾನೆ.

ಭದ್ರತೆಯನ್ನು ಉಚಿತವಾಗಿ ಒದಗಿಸಿದರೆ ಮಾತ್ರ ತಾನು ಅದನ್ನು ಪಡೆಯುವುದಾಗಿ ಆತ ಹೇಳಿದ್ದಾನೆ. ರಕ್ಷಣೆಯನ್ನು ಕೋರಿ ಕುಲಕರ್ಣಿ ಅರ್ಜಿ ಸಲ್ಲಿಸಿದ ಬಳಿಕ ಓರ್ವ ಸಶಸ್ತ್ರ ಪೊಲೀಸ್ ಭದ್ರತೆಯನ್ನು ಆತನಿಗೆ ಒದಗಿಸಲಾಗಿತ್ತು.

ಭದ್ರತೆಯನ್ನು ಪಡೆಯಲು ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂಬ ಮಾಹಿತಿಯನ್ನು ತನಗೆ ಯಾರೂ ನೀಡಿರಲಿಲ್ಲ ಎಂದು ಕುಲಕರ್ಣಿ ಪೊಲೀಸರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾನೆ.

“ನಾನು ಭದ್ರತೆಗೆ ಶುಲ್ಕವನ್ನು ಪಾವತಿಸಬೇಕೆಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ,ಆದರೆ ನನ್ನ ಆರ್ಥಿಕ ಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ. ಹೀಗಾಗಿ ಇಂದಿನ ಭದ್ರತೆಗಾಗಿ ಒಂದು ದಿನದ ಶುಲ್ಕ 1,772 ರೂ.ಗಳನ್ನು ಪಾವತಿಸುತ್ತಿದ್ದೇನೆ ಮತ್ತು ಭದ್ರತೆ ಉಚಿತವಲ್ಲದಿದ್ದರೆ ಅದು ನನಗೆ ಬೇಡ” ಎಂದು ಕುಲಕರ್ಣಿ ಪತ್ರದಲ್ಲಿ ಹೇಳಿದ್ದಾನೆ.

ಕುಲಕರ್ಣಿ ರಕ್ಷಣೆಯನ್ನು ಕೋರಿ ಮೇ 2019ರಲ್ಲಿ ಅರ್ಜಿ ಸಲ್ಲಿಸಿದ್ದ. ಆದರೆ ಈಗ ಭದ್ರತೆ ದೊರಕಿ 12 ಗಂಟೆಗಳಾಗುವಷ್ಟರಲ್ಲಿಯೇ ಅದನ್ನು ಮರಳಿಸಿದ್ದಾನೆ. ಕುಲಕರ್ಣಿ ಪ್ರಕರಣದಲ್ಲಿ ಭದ್ರತೆಯನ್ನೊದಗಿಸಲಾದ ಮೂರನೇ ಆರೋಪಿಯಾಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News