‘ಇದು ಆರ್‌ಟಿಐ ಮೇಲೆ ಅಂತಿಮ ಪ್ರಹಾರ’: ಸರಕಾರದ ಹೊಸನಿಯಮಗಳಿಗೆ ಸೋನಿಯಾ ಆಕ್ರೋಶ

Update: 2019-10-31 14:10 GMT

ಹೊಸದಿಲ್ಲಿ, ಅ.31: ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ)ಯನ್ನು ನಾಶಗೊಳಿಸಲು ಅಥವಾ ದುರ್ಬಲಗೊಳಿಸಲು ಸರಕಾರವು ಪ್ರಯತ್ನಿಸುತ್ತಿದೆ ಎಂದು ಗುರುವಾರ ಇಲ್ಲಿ ಆರೋಪಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು,ತನ್ನ ಬಹುಸಂಖ್ಯಾತ ಅಜೆಂಡಾವನ್ನು ಜಾರಿಗೊಳಿಸಲು ಈ ಕಾನೂನು ಅಡ್ಡಿಯಾಗಿದೆ ಎಂದು ನರೇಂದ್ರ ಮೋದಿ ಸರಕಾರವು ಭಾವಿಸಿದೆ ಎಂದು ಹೇಳಿದ್ದಾರೆ.

 ಸರಕಾರವು ಕಳೆದ ವಾರ ನೂತನ ಆರ್‌ಟಿಐ ನಿಯಮಗಳಡಿ ಮಾಹಿತಿ ಆಯುಕ್ತರ ಅಧಿಕಾರಾವಧಿಯನ್ನು ಐದರಿಂದ ಮೂರು ವರ್ಷಗಳಿಗೆ ಮೊಟಕುಗೊಳಿಸಿತ್ತು. ಅವರ ವೇತನವನ್ನು ಕೇಂದ್ರ ಸರಕಾರವು ನಿರ್ಧರಿಸಲಿದೆ. ಈವರೆಗೆ ಅವರು ಚುನಾವಣಾ ಆಯೋಗದ ಅಧಿಕಾರಿಗಳಿಗೆ ಸಮನಾದ ವೇತನ ಪಡೆಯುತ್ತಿದ್ದರು. ಸರಕಾರದ ಕ್ರಮವು ಮಾಹಿತಿ ಆಯುಕ್ತರು, ಅವರ ಸ್ವಾತಂತ್ರ್ಯ ಮತ್ತು ಸ್ವಾಯತ್ತೆಯ ಮೇಲಿನ ದಾಳಿಯಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತರು ಬಣ್ಣಿಸಿದ್ದಾರೆ.

ಸರಕಾರದ ವಿರುದ್ಧ ಮಾಹಿತಿ ಬಿಡುಗಡೆಗೆ ಅವಕಾಶ ನೀಡುವ ಯಾವುದೇ ಅಧಿಕಾರಿಯನ್ನು ಈಗ ತಕ್ಷಣವೇ ಹುದ್ದೆಯಿಂದ ತೆಗೆಯಬಹುದು. ಇದು ಕೇಂದ್ರ ಮತ್ತು ರಾಜ್ಯಗಳಲ್ಲಿಯ ಎಲ್ಲ ಮಾಹಿತಿ ಆಯುಕ್ತರಲ್ಲಿ ಭೀತಿಯನ್ನು ಸೃಷ್ಟಿಸುತ್ತದೆ ಎಂಬ ಸೋನಿಯಾರ ಹೇಳಿಕೆಯನ್ನು ಕಾಂಗ್ರೆಸ್ ಟ್ವೀಟಿಸಿದೆ.

ಐದು ವರ್ಷಗಳ ಅಧಿಕಾರಾವಧಿ ಮತ್ತು ನಿಗದಿತ ವೇತನದ ಹಿಂದಿನ ನಿಯಮಗಳನ್ನು ಮಾಹಿತಿ ಆಯುಕ್ತರ ಸ್ವಾತಂತ್ರ್ಯವನ್ನು ಖಚಿತಪಡಿಸುವ ಉದ್ದೇಶದಿಂದ ರೂಪಿಸಲಾಗಿತ್ತು. ಈ ಮಹತ್ವದ ಹುದ್ದೆಗಳಿಗೆ ಸೌಲಭ್ಯಗಳನ್ನು ತಗ್ಗಿಸುವ ಮೂಲಕ ಇಂತಹ ನಿಗಾ ಸ್ಥಿತಿಯಡಿ ಕೆಲಸ ಮಾಡಲು ಯಾವುದೇ ಆತ್ಮಗೌರವ ಹೊಂದಿರುವ ಅಧಿಕಾರಿ ಒಪ್ಪುವುದಿಲ್ಲ ಎನ್ನುವುದನ್ನು ಮೋದಿ ಸರಕಾರವು ಖಚಿತಪಡಿಸಿದೆ ಎಂದೂ ಸೋನಿಯಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News