ದಲಿತ ಮಹಿಳೆಯರಿಗೆ ದೇಗುಲ ಪ್ರವೇಶ ನಿರಾಕರಣೆ: ಪ್ರಕರಣ ದಾಖಲು

Update: 2019-10-31 14:28 GMT

 ಹೊಸದಿಲ್ಲಿ, ಅ. 31: ಪಶ್ಚಿಮ ಉತ್ತರಪ್ರದೇಶದ ಬುಲಂದ್‌ಶಹರ್ ಜಿಲ್ಲೆಯ ದೇವಾಲಯವೊಂದಕ್ಕೆ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಮಹಿಳೆಯರ ಗುಂಪಿಗೆ ಪ್ರವೇಶ ನಿರಾಕರಿಸಿರುವುದನ್ನು ದಾಖಲಿಸಿದ ವೀಡಿಯೊವೊಂದು ಬಹಿರಂಗಗೊಂಡಿದೆ.

 ಅಕ್ಟೋಬರ್ 25ರಂದು ಈ ಘಟನೆ ನಡೆದಿದೆ. 6 ನಿಮಿಷಗಳ ಈ ವೀಡಿಯೊವನ್ನು ಮಹಿಳೆಯೋರ್ವರು ದಾಖಲಿಸಿದ್ದಾರೆ ಹಾಗೂ ಬುಧವಾರ ಆನ್‌ಲೈನ್‌ನಲ್ಲಿ ಹಂಚಿದ್ದಾರೆ. ವೀಡಿಯೊದಲ್ಲಿ ದೇವಾಲಯದ ಮುಚ್ಚಿದ ಗೇಟ್‌ನ ಎದುರು ಕಪ್ಪು ಅಂಗಿ ಹಾಕಿದ ವ್ಯಕ್ತಿಯೋರ್ವನಲ್ಲಿ ‘‘ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲು ಭೀತಿಪಡುತ್ತಿರುವುದು ಯಾಕೆ ?’’ ಎಂದು ಮಹಿಳೆಯರು ಪ್ರಶ್ನಿಸುತ್ತಿರುವ ಧ್ವನಿ ಕೇಳಿ ಬರುತ್ತದೆ. ಮೇಲ್ಜಾತಿಗೆ ಸೇರಿದವನೆಂದು ಕಂಡು ಬರುವ ವ್ಯಕ್ತಿ, ‘‘ನಾನು ನಿಮಗೆ ಯಾಕೆ ಹೆದರಬೇಕು ?’’ ಎಂದು ಪ್ರತಿಕ್ರಿಯಿಸುತ್ತಾನೆ.

‘‘ಮಹಿಳೆಯರಿಗೆ ದೇವಾಲಯ ಪ್ರವೇಶಿಸಲು ನಿಷೇಧ ಹೇರಿರುವುದನ್ನು ಇತರರು ಕೇಳಿದರೆ, ಅವಮಾನ ಪಟ್ಟುಕೊಳ್ಳುವವರು’’ ಎಂದು ಮುಖ ಕಾಣದ ಮಹಿಳೆಯೋರ್ವರು ಹೇಳುವುದು ವೀಡಿಯೊದಲ್ಲಿ ಕೇಳಿ ಬಂದಿದೆ. ‘‘ನಮಗೆ ದೇವಾಲಯ ಪ್ರವೇಶಿಸುವ ಹಕ್ಕು ಇದೆ. ದೇವಾಲಯ ಪ್ರವೇಶಿಸಲು ಅವಕಾಶ ನೀಡುವ ವರೆಗೆ ದೇವಾಲಯದ ಗೇಟಿನಿಂದ ಹಿಂದೆ ಸರಿಯಲಾರೆವು’’ ಎಂದು ಇನ್ನೋರ್ವ ಮಹಿಳೆ ಹೇಳುವುದು ದಾಖಲಾಗಿದೆ.

ಇದಕ್ಕೆ ಆ ವ್ಯಕ್ತಿ ಮಹಿಳೆಯರತ್ತ ಕೈ ತೋರಿಸಿ ಗೌರವಯುತವಾಗಿ ಮಾತನಾಡಿ ಎಂದು ಎಚ್ಚರಿಕೆ ನೀಡಿದ್ದಾನೆ. ಇದಕ್ಕೆ ಮಹಿಳೆಯರು “ನೀವು ಹೊಡೆಯಲು ಬಯಸಿದರೆ, ಹೊಡೆಯಿರಿ. ಆದರೆ, ನಾವು ಇಲ್ಲಿಯೇ ಕುಳಿತುಕೊಳ್ಳುತ್ತೇವೆ” ಎಂದು ಪ್ರತಿಕ್ರಿಯೆ ನೀಡಿರುವುದು ವೀಡಿಯೊದಲ್ಲಿ ದಾಖಲಾಗಿದೆ.

 “ನೀವು ನಮ್ಮನ್ನು ಯಾಕೆ ಕೊಲ್ಲಬೇಕು ? ನಾವೇ ಇಲ್ಲಿ ಸಾಯುತ್ತೇವೆ. ಬೇಕಾದರೆ ಲಾಠಿ ತನ್ನಿ. ನಾವು ಇಲ್ಲಿಂದ ತೆರಳುವುದಿಲ್ಲ. ಬೇಕಾದರೆ ಗ್ರಾಮದ ಜನರೆಲ್ಲರನ್ನೂ ಇಲ್ಲಿಗೆ ಕರೆ ತನ್ನಿ” ಎಂದು ಮಹಿಳೆಯೋರ್ವರು ಹೇಳುವುದು ದಾಖಲಾಗಿದೆ. ಅದಕ್ಕೆ ಕಪ್ಪು ಅಂಗಿ ಹಾಕಿದ ವ್ಯಕ್ತಿ, ಈ ಸೊತ್ತು ಹಾಗೂ ದೇವಾಲಯ ಠಾಕೂರರಿಗೆ ಸೇರಿದ್ದು ಎಂದು ಹೇಳಿದ್ದಾನೆ.

 ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News