ಮಂಜನಾಡಿ: ಅಕ್ರಮ ಮರಳು ಸಾಗಾಟ ಲಾರಿಯನ್ನು ತಡೆದ ಗ್ರಾಮಕರಣಿಕನಿಗೆ ಹಲ್ಲೆ; ಆರೋಪ

Update: 2019-10-31 15:07 GMT

ಕೊಣಾಜೆ: ಕೊಣಾಜೆ ಠಾಣಾ ವ್ಯಾಪ್ತಿಯ ಮಂಜನಾಡಿ ಬಳಿ ಅಕ್ರಮ ಮರಳು ಸಾಗಾಟ ತಡೆಯುವ ನಿಟ್ಟಿನಲ್ಲಿ ಕರ್ತವ್ಯ ನಿರತರಾಗಿದ್ದ ಗ್ರಾಮಕರಣಿಕರೋರ್ವರ ಮೇಲೆ ಹಲ್ಲೆ ನಡೆಸಿ, ಮರಳನ್ನು ಬಲವಂತವಾಗಿ ಕೇರಳಕ್ಕೆ ಸಾಗಾಟ ಮಾಡಿದ ಪ್ರಕರಣ ನಡೆದಿದ್ದು, ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅಕ್ರಮ ಮರಳುಗಾರಿಕೆ ಸಾಗಾಟ ತಡೆಯುವ ನಿಟ್ಟಿನಲ್ಲಿ ಮಂಗಳೂರಿನ ಸಹಾಯಕ ಆಯುಕ್ತರು ತಂಡವೊಂದನ್ನು ರಚಿಸಿದ್ದರು. ಅದರಂತೆ ಮಂಜನಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತ್ತಾವರದ ಗ್ರಾಮಕರಣಿಕ ಅವಿನಾಶ್ ಎಂಬವರು ಕರ್ತವ್ಯನಿರತರಾಗಿದ್ದರು. ಈ ಸಂದರ್ಭ ಕೆಎ 19, 8905 ನಂಬರಿನ ಟಿಪ್ಪರ್ ಬಂದಿದ್ದು, ಅದರಲ್ಲಿ ಕೇರಳಕ್ಕೆ ಮರಳು ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಇದನ್ನು ಕಂಡ ಅವಿನಾಶ್ ಅವರು ಟಿಪ್ಪರ್ ತಡೆಯಲು ಯತ್ನಿಸಿದ್ದರು. ಈ ಸಂದರ್ಭದಲ್ಲಿ  ಚಾಲಕ ಟಿಪ್ಪರ್ ಮಾಲಕನಿಗೆ ಕರೆ ಮಾಡಿದ್ದಾನೆ. ಆ ಸಂದರ್ಭ ಇನ್ನೋವ ಕಾರಿನಲ್ಲಿ ವ್ಯಕ್ತಿಯೋರ್ವ ಆಗಮಿಸಿ ಅವಿನಾಶ್ ಅವರೊಂದಿಗೆ ವಾಗ್ವಾದಕ್ಕಕಿಳಿದು  ರಸ್ತೆಯ ಬದಿಗೊತ್ತಿ ಟಿಪ್ಪರನ್ನು ಬಲವಂತವಾಗಿ ಕೊಂಡೊಯ್ಯುವಂತೆ ಚಾಲಕನಿಗೆ ಸೂಚಿಸಿದ್ದಾನೆ. ಅದರಂತೆ ಚಾಲಕನೂ ಅಕ್ರಮವಾಗಿ ಚಾಲನೆ ಮಾಡಿಕೊಂಡು ಮುಂದೆ ಸಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಕರ್ತವ್ಯನಿರತ ಸರ್ಕಾರಿ ಸಿಬ್ಬಂದಿಯನ್ನು ಅಡ್ಡಿಪಡಿಸಿದ ಆರೋಪದಲ್ಲಿ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News