ದೊಡ್ಡಿಪಾಳ್ಯ ನರಸಿಂಹಮೂರ್ತಿ ಅಕ್ರಮ ಬಂಧನ ಸಮಕಾಲೀನ ರಾಜಕೀಯದ ರೂಪಕ: ಜಿ.ರಾಜಶೇಖರ್
ಉಡುಪಿ, ಅ.31: ಸಾಮಾಜಿಕ ಹೋರಾಟಗಾರ ಹಾಗೂ ಪತ್ರಕರ್ತ ಬೆಂಗಳೂರಿನ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರನ್ನು ರಾಯಚೂರಿನ ಪೊಲೀಸರು ಅ.25ರಂದು ಅಕ್ರಮವಾಗಿ ಬಂಧನಕ್ಕೊಳಪಡಿಸಿರುವುದು ನಮ್ಮ ಸಮಕಾಲೀನ ರಾಜಕೀಯದ ರೂಪಕದಂತೆ ಕಂಡುಬರುತ್ತಿದೆ ಎಂದು ಹಿರಿಯ ಚಿಂತಕ ಹಾಗೂ ಕೋಮು ಸೌಹಾರ್ದ ವೇದಿಕೆಯ ಅಧ್ಯಕ್ಷ ಜಿ.ರಾಜಶೇಖರ್ ಬಣ್ಣಿಸಿದ್ದಾರೆ.
ಕರ್ನಾಟಕ ಕೋಮುಸೌಹಾರ್ದ ವೇದಿಕೆ ಹಾಗೂ ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಉಡುಪಿ ಜಿಲ್ಲೆ ಇವುಗಳ ಜಂಟಿ ಆಶ್ರಯದಲ್ಲಿ ಗುರುವಾರ ಸಂಜೆ ಅಜ್ಜರಕಾಡಿನ ಹುತಾತ್ಮರ ಚೌಕದ ಎದುರು ನರಸಿಂಹಸ್ವಾಮಿ ಅವರ ಬಂಧನವನ್ನು ವಿರೋಧಿಸಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ವಿಚಾರಣೆಗಾಗಿ ಕರೆಸಿ, ತಪ್ಪು ಗುರುತಿಸುವಿಕೆಯಲ್ಲಿ ನೆಪದಲ್ಲಿ ಬಂಧಿಸಿರುವುದು ಅಕ್ರಮ ಹಾಗೂ ಕಾನೂನಿಗೆ ವಿರುದ್ಧವಾದುದಾಗಿದೆ ಎಂದು ಹೇಳಿದ ಅವರು, ಇದು ಸರಕಾರಿ ಪ್ರಾಯೋಜಿತ ಕಾರ್ಯಕ್ರಮ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಇಂದು ಭಿನ್ನಮತೀಯರನ್ನು ಹಾಗೂ ಸರಕಾರದ ಧೋರಣೆಗಳನ್ನು ವಿರೋಧಿಸುವವರನ್ನು ಪ್ರಜೆಗಳೂ ಅಲ್ಲ, ಕನಿಷ್ಠ ಮನುಷ್ಯರೂ ಅಲ್ಲವೆಂಬಂತೆ ಕಾಣಲಾಗುತ್ತಿದೆ. ಇದು ಸರಕಾರದ ದುರಹಂಕಾರಿ ಧೋರಣೆ ಯನ್ನು ತೋರಿಸುತ್ತದೆ ಎಂದು ರಾಜಶೇಖರ್ ಟೀಕಿಸಿದರು.
ದೇಶದಲ್ಲಿರುವ ಮಾನವ ಹಕ್ಕು ಹೋರಾಟಗಾರರು ಹಾಗೂ ಪ್ರಮುಖ ಪತ್ರಕರ್ತರ ಮೇಲೆ ಇಸ್ರೇಲಿನ ಗುಪ್ತಚರ ಇಲಾಖೆಯ ಮೂಲಕ ಹದ್ದಿನ ಕಣ್ಣಿಟ್ಟಿರುವ ಬಗ್ಗೆ ಇಂದು ಹೊಸದಿಲ್ಲಿ ಮೂಲದ ಪತ್ರಿಕೆಯಲ್ಲಿ ಬಂದಿರುವ ವರದಿ, ದೇಶ ಸಾಗುತ್ತಿರುವ ಗಂಭೀರ ಸ್ಥಿತಿಯನ್ನು ನಿಚ್ಚಳವಾಗಿ ತೋರಿಸುತ್ತಿದೆ ಎಂದವರು ಕಳವಳ ವ್ಯಕ್ತಪಡಿಸಿದರು.
ಕೋಮು ಸೌಹಾರ್ದ ವೇದಿಕೆಯ ಉಪಾಧ್ಯಕ್ಷ ಕೆ.ಫಣಿರಾಜ್ ಮಾತನಾಡಿ, ಕಳೆದ ಮೂರು ದಶಕಗಳಿಂದ ರಾಜ್ಯದ ಹೆಚ್ಚಿನೆಲ್ಲಾ ಹೋರಾಟಗಳಲ್ಲಿ ಭಾಗವಹಿಸುತಿದ್ದ ತಮ್ಮೆಲ್ಲರ ಸಂಗಾತಿ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರ ಬಂಧನವೇ ಅನುಮಾನಾಸ್ಪದ ಹಾಗೂ ಅಕ್ರಮವಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಸಂವಿಧಾನ ಹಾಗೂ ಕಾನೂನನ್ನು ಲೆಕ್ಕಕ್ಕಿಟ್ಟುಕೊಳ್ಳದೇ ವರ್ತಿಸಿದ್ದಾರೆ ಎಂದು ಆರೋಪಿಸಿದರು.
ನರಸಿಂಹಮೂರ್ತಿ ಬಂಧನ ಪ್ರಕರಣದಲ್ಲಿ ರಾಯಚೂರು ಪೊಲೀಸರ ವರ್ತನೆಯನ್ನು ಕಂಡರೆ, ಇದು ಅಕಸ್ಮಿಕ ‘ತಪ್ಪು ತಿಳುವಳಿಕೆ’ಯ ಪ್ರಮಾದವಾಗಿರದೇ, ಅನಾವಶ್ಯಕವಾಗಿ ಪ್ರಜಾಪ್ರಭುತ್ವದ ನಿಯಮಗಳ ಪ್ರಕಾರ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿಯೊಬ್ಬನ ಮೇಲೆ ಅನ್ಯಾಯವಾದ ಆರೋಪ ಹೊರಿಸಿ ಬಂಧನಕ್ಕೆ ಒಳಪಡಿಸಿದಂತೆ ಕಂಡುಬರುತ್ತಿದೆ ಎಂದವರು ಟೀಕಿಸಿದರು.
ಸಭೆಯನ್ನುದ್ದೇಶಿಸಿ ವಂ. ವಿಲಿಯಂ ಮಾರ್ಟಿಸ್, ದಸಂಸದ ಸುಂದರ್ ಮಾಸ್ತರ್ ಮುಂತಾದವರು ಮಾತನಾಡಿದರು. ಕೊನೆಯಲ್ಲಿ ತಹಶೀಲ್ದಾರ್ ಮೂಲಕ ರಾಜ್ಯ ಗೃಹ ಸಚಿವರಿಗೆ ಮನವಿಯೊಂದನ್ನು ನೀಡಲಾಗಿದ್ದು, ಇದರಲ್ಲಿ ಸಚಿವರು ಮಧ್ಯ ಪ್ರವೇಶಿಸಿ ಅಕ್ರಮವಾಗಿ ಬಂಧಿಸಿರುವ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಹಾಗೂ ಇಡೀ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಯ ಸಂಚಾಲಕ ಶ್ಯಾಮರಾಜ್ ಬಿರ್ತಿ, ವಂ. ವಿಲಿಯಂ ಮಾರ್ಟಿಸ್, ಸಿರಿಲ್ ಮಥಾಯಸ್, ಎಸ್‌ಐಒ ಜಿಲ್ಲಾಧ್ಯಕ್ಷ ಅಫನ್ ಹೂಡೆ, ಕಾರ್ಯದರ್ಶಿ ಶಾರುಖ್ ಮುಂತಾದವರು ಉಪಸ್ಥಿತರಿದ್ದರು.