ಟಿಪ್ಪು ಪಠ್ಯವನ್ನು ಕೈಬಿಟ್ಟರೆ ಶಿಕ್ಷಣ ಸಚಿವರ ಅಣಕು ಶವ ಯಾತ್ರೆ-ಕಪ್ಪು ಬಾವುಟ ಪ್ರದರ್ಶನ: ಸಿಎಫ್‌ಐ ಎಚ್ಚರಿಕೆ

Update: 2019-10-31 16:18 GMT

ಮಡಿಕೇರಿ, ಅ.31: ಟಿಪ್ಪುಸುಲ್ತಾನ್ ಈ ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಎಂಬುವುದು ಜಗತ್ತು ಕಂಡ ಇತಿಹಾಸವಾಗಿದೆ. ಟಿಪ್ಪು ಕರ್ನಾಟಕದ ಹೆಮ್ಮೆಯು ಹೌದು. ಟಿಪ್ಪುವಿನ ಆಡಳಿತ ಸುಧಾರಣೆ, ಆರ್ಥಿಕ ನೀತಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನದ ಅಭಿವೃದ್ಧಿಗೆ ಟಿಪ್ಪು ಕೈಗೊಂಡ ಹಲವು ಕಾರ್ಯಕ್ರಮಗಳು ರಾಜ್ಯವನ್ನು ಸಂಪದ್ಬರಿತವನ್ನಾಗಿ ಮಾಡಿತ್ತು. ಅಂತಹ ಟಿಪ್ಪುವಿನ ಚರಿತ್ರೆಯನ್ನು ಪಠ್ಯದಿಂದ ಕೈ ಬಿಟ್ಟರೆ ಶಿಕ್ಷಣ ಸಚಿವರ ಅಣಕು ಶವಯಾತ್ರೆ ಮತ್ತು ಅವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು ಎಂದು ಸಿಎಫ್‌ಐ ಎಚ್ಚರಿಸಿದೆ.

ಮಡಿಕೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಸಿಎಫ್‌ಐ ರಾಜ್ಯಾಧ್ಯಕ್ಷ ಫಯಾಝ್ ದೊಡ್ಡಮನೆ ಟಿಪ್ಪುವಿನ ಸಮಾಜವಾದ ಮತ್ತು ಜಾತ್ಯತೀತ ಸಿದ್ಧಾಂತವು ಇಂದಿಗೂ ಪ್ರಸ್ತುತ. ಟಿಪ್ಪು ಸುಲ್ತಾನ್‌ಗೆ ಸಮಾಜದ ಮೇಲಿದ್ದ ಕಲ್ಪನೆಯು ಭಾರತೀಯರಿಗೆ ಸಮಾನತೆಯುಳ್ಳ ದೇಶ ಕಟ್ಟಲು ಮಾದರಿಯಾಗಿದೆ. 200 ವರ್ಷಗಳ ಹಿಂದೆ ಸಾಮ್ರಾಜ್ಯವನ್ನು ಸ್ಥಾಪಿಸಿ, ಬ್ರಿಟೀಷರ ವಿರುದ್ಧ ಶೌರ್ಯದಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಶೈಲಿಯು ಇಂದಿಗೂ ಸ್ಪೂರ್ತಿದಾಯಕವಾಗಿದೆ. ಟಿಪ್ಪುಮಾಡಿದ ಎಲ್ಲಾ ಪ್ರಗತಿಪರ ಕೆಲಸಗಳನ್ನು ಫ್ಯಾಶಿಸ್ಟ್ ಸರಕಾರ ಮತ್ತು ಮನುವಾದಿ ಇತಿಹಾಸಕಾರರು ಮರೆಮಾಚುವ ಮತ್ತು ತಿರುಚುವ ಪ್ರಯತ್ನವು ಟಿಪ್ಪುವಿನ ಇತಿಹಾಸವನ್ನು ದೇಶದಿಂದ ಅಳಿಸುವ ಷಡ್ಯಂತ್ರವಾಗಿದೆ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ಸರಕಾರವು ಅಧಿಕಾರಕ್ಕೆ ಬಂದ ತಕ್ಷಣವೇ ಟಿಪ್ಪುಜಯಂತಿಯನ್ನು ರದ್ದುಮಾಡಿ ರಾಜ್ಯದಲ್ಲಿ ಟಿಪ್ಪುಹೆಸರಿನ ರಾಜಕೀಯ ಆರಂಭಿಸಿತು. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಎದ್ದಾಗಲೆಲ್ಲಾ ಭಾವನಾತ್ಮಕ ವಿಷಯಗಳಿಗೆ ರಾಜಕೀಯ ಮಾಡುವುದು ಬಿಜೆಪಿಯ ಬಂಡವಾಳವಾಗಿದೆ. ಇತ್ತೀಚೆಗೆ ಶಿಕ್ಷಣ ಸಚಿವರು ಪಠ್ಯ ಪುಸ್ತಕಗಳಲ್ಲಿನ ಟಿಪ್ಪುಸುಲ್ತಾನ್ ಕುರಿತಾದ ವಿಷಯವನ್ನು ತೆಗೆದುಹಾಕುವ ಹೇಳಿಕೆಯು ಕೂಡಾ ಟಿಪ್ಪುವಿನ ಇತಿಹಾಸವನ್ನು ವಿದ್ಯಾರ್ಥಿಗಳ ಶಿಕ್ಷಣದಿಂದ ಮರೆಮಾಚುವ ಹುನ್ನಾರವಾಗಿದೆ. ಸರಕಾರವು ಟಿಪ್ಪುವಿನ ಇತಿಹಾಸವನ್ನು ಶಿಕ್ಷಣ ಕ್ಷೇತ್ರದಿಂದ ಇಲ್ಲದಾಗಿಸುವ ಪ್ರಯತ್ನವು ದೇಶಕ್ಕೆ ಎಸೆಗುವ ದ್ರೋಹವಾಗಿದೆ. ಒಂದು ವೇಳೆ ಪಠ್ಯಗಳನ್ನು ಸರಕಾರ ತೆಗೆಯಲು ಮುಂದಾದರೆ ಕ್ಯಾಂಪಸ್ ಫ್ರಂಟ್ ಶಿಕ್ಷಣ ಸಚಿವರ ಅಣಕು ಶವ ಯಾತ್ರೆ ಮತ್ತು ಕಪ್ಪುಬಾವುಟ ಪ್ರದರ್ಶನ ಮಾಡುವುದು ಅನಿವಾರ್ಯ ಎಂದು ಫಯಾಝ್ ದೊಡ್ಡಮನೆ ತಿಳಿಸಿದರು.

ಅಭಿಯಾನ: ಟಿಪ್ಪುವಿನ ಇತಿಹಾಸ, ಆದರ್ಶ ಮತ್ತು ಕೊಡುಗೆಯನ್ನು ಕಾಪಾಡುವ ಮತ್ತು ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಸಂರಕ್ಷಿಸುವ ಉದ್ದೇಶದಿಂದ ಸಿಎಫ್‌ಐ ರಾಜ್ಯ ಸಮಿತಿಯು ‘ಟಿಪ್ಪುಮರೆಯಲಾಗದ ದಂತಕಥೆ’ ಎಂಬ ಅಭಿಯಾನವನ್ನು ನವೆಂಬರ್ 5ರಿಂದ 25ರ ತನಕ ಹಮ್ಮಿಕೊಂಡಿದೆ. ಈ ಅಭಿಯಾನದಲ್ಲಿ ವಿದ್ಯಾರ್ಥಿಗಳಿಗೆ ಪ್ರಬಂಧ, ಕವನ, ಚಿತ್ರಕಲಾ ಸ್ಪರ್ಧೆ ವಿಶೇಷವಾಗಿ ಮಕ್ಕಳಿಗೆ ಛೋಟಾ ಸುಲ್ತಾನ್ ಫ್ಯಾನ್ಸಿ ಡ್ರೆಸ್ ಸ್ಪರ್ಧೆಯನ್ನು ನಡೆಸಲಿದೆ. ಈ ಅಭಿಯಾನದಲ್ಲಿ ರಾಜ್ಯದ ಎಲ್ಲಾ ವಿದ್ಯಾರ್ಥಿಗಳು ಟಿಪ್ಪುವಿನ ಇತಿಹಾಸವನ್ನು ಉಳಿಸುವ ಉದ್ದೇಶದಿಂದ ಸಕ್ರಿಯವಾಗಿ ಭಾಗವಹಿಸಬೇಕೆಂದು ಫಯಾಝ್ ದೊಡ್ಡಮನೆ ಕರೆ ನೀಡಿದರು.

ಸಿಎಫ್‌ಐ ರಾಜ್ಯ ಕಾರ್ಯದರ್ಶಿ ಅಥಾವುಲ್ಲಾ ಪುಂಜಾಲಕಟ್ಟೆ, ಸದಸ್ಯರಾದ ಮುಹಮ್ಮದ್ ರಿಯಾಝ್, ಇಮ್ರಾನ್ ಪಿ.ಜೆ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News