ರಾಜ್ಯಮಟ್ಟದ ಪ್ರಾಥಮಿಕ-ಪ್ರೌಢ ಶಾಲಾ ಬ್ಯಾಡ್ಮಿಂಟನ್: ಬೆಳಗಾವಿ ವಿಭಾಗಕ್ಕೆ ಸಮಗ್ರ ಪ್ರಶಸ್ತಿ
ಉಡುಪಿ, ಅ.31: ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಅಜ್ಜರಕಾಡು ಮಹಾತ್ಮಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಬೆಳಗಾವಿ ವಿಭಾಗ ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
14ರ ವಯೋಮಿತಿ ಬಾಲಕಿಯರ ವಿಭಾಗ, 17ರ ವಯೋಮಿತಿ ಬಾಲಕ- ಬಾಲಕಿಯರ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಬೆಳಗಾವಿ ವಿಭಾಗ ಸಮಗ್ರ ಪ್ರಶಸ್ತಿ ತನ್ನದಾಗಿಸಿಕೊಂಡರೆ, 14ರ ವಯೋಮಿತಿ ಬಾಲಕರ ವಿಭಾಗದಲ್ಲಿ ಮೈಸೂರು ವಿಭಾಗ ಅಗ್ರ ಸ್ಥಾನ ಪಡೆಯಿತು.
14ರ ವಯೋಮಿತಿ ಬಾಲಕರ ವಿಭಾಗದಲ್ಲಿ ಬೆಂಗಳೂರು ವಿಭಾಗ ದ್ವಿತೀಯ, ಬೆಳಗಾವಿ ತೃತೀಯ, 14ರ ಬಾಲಕಿಯರ ವಿಭಾಗದಲ್ಲಿ ಮೈಸೂರು ವಿಭಾಗ ದ್ವಿತೀಯ, ಬೆಂಗಳೂರು ತೃತೀಯ, 17ರ ವಯೋಮಿತಿ ಬಾಲಕರ ವಿಭಾಗದಲ್ಲಿ ಬೆಂಗಳೂರು ದ್ವಿತೀಯ, ಮೈಸೂರು ತೃತೀಯ, 17ರ ವಯೋಮಿತಿ ಬಾಲಕಿಯರ ವಿಭಾಗದಲ್ಲಿ ಮೈಸೂರು ದ್ವಿತೀಯ, ಬೆಂಗಳೂರು ತೃತೀಯ ಸ್ಥಾನಗಳನ್ನು ಪಡೆದವು.
ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನಪಡೆದುಕೊಂಡ ಬೆಳಗಾವಿ ವಿಭಾಗದ ಮೂರು ತಂಡ ಹಾಗೂ ಮೈಸೂರು ವಿಭಾಗದ ಬಾಲಕರ ತಂಡ ನವೆಂಬರ್‌ನಲ್ಲಿ ಮಧ್ಯಪ್ರದೇಶದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.
ಕೊನೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ತಾಪಂ ಉಪಾಧ್ಯಕ್ಷ ಭುಜಂಗ ಶೆಟ್ಟಿ, ನಗರಸಭೆ ಸದಸ್ಯೆ ರಶ್ಮಿ ಭಟ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶೇಷಶಯನ ಕಾರಿಂಜ, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಮಂಜುಳಾ, ತಾಲೂಕು ದೈಹಿಕ ಶಿಕ್ಷಕ ಸಂಘದ ಪರಿವೀಕ್ಷಣಾಧಿಕಾರಿ ವಿಶ್ವನಾಥ ಬಾಯರಿ, ಬಾಲಕಿಯರ ಸರಕಾರಿ ಪ.ಪೂ. ಕಾಲೇಜು ಪ್ರಾಂಶುಪಾಲ ಎಸ್.ರುದ್ರೇಗೌಡ, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಮಧುಕರ್ ಎಸ್., ಎಸ್‌ಡಿಎಂಸಿ ಉಪಾಧ್ಯಕ್ಷೆ ತಾರಾದೇವಿ, ಕಾಶಿನಾಥ್ ಪೈ, ಸುದರ್ಶನ್ ನಾಯಕ್, ಎಸ್.ವಿಠಲ ಶೆಟ್ಟಿ, ಕಿಶೋರ್‌ಮುಂತಾದವರು ಉಪಸ್ಥಿತರಿದ್ದರು.