ರಾಜ್ಯದಲ್ಲಿ ಅನುಶೋಧನೆ ಪ್ರಾಧಿಕಾರ: ಡಿಸಿಎಂ ಅಶ್ವಥ್ ನಾರಾಯಣ

Update: 2019-10-31 17:04 GMT

ಮಂಗಳೂರು: ಅನುಶೋಧನೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ರಾಜ್ಯದಲ್ಲಿ ಅನುಶೋಧನೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಅನುಶೋಧನೆ ಪ್ರಾಧಿಕಾರ (ಇನ್ನೊವೇಟಿವ್ ಅಥಾರಿಟಿ) ಆರಂಭಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಉಪಮುಖ್ಯಮಂತ್ರಿ, ವೈದ್ಯಕೀಯ ಶಿಕ್ಷಣ, ಉನ್ನತ ಶಿಕ್ಷಣ, ಐಟಿ-ಬಿಟಿ ಖಾತೆ ಸಚಿವ ಡಾ.ಅಶ್ವಥ್ ನಾರಾಯಣ ನುಡಿದರು.

ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಶಾಖೆಯ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಇದು ದೇಶದಲ್ಲೇ ಮೊಟ್ಟಮೊದಲ ಅನುಶೋಧನೆ ಪ್ರಾಧಿಕಾರವಾಗಲಿದೆ ಎಂದು ಬಣ್ಣಿಸಿದರು.

ಪ್ರಾಧಿಕಾರದ ವ್ಯಾಪ್ತಿಯಲ್ಲಿ ಹೊಸ ಆವಿಷ್ಕಾರಗಳಿಗೆ ಕಾನೂನಾತ್ಮಕ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಎರಡು ವರ್ಷಗಳ ಅವಧಿಗೆ ಅವರಿಗೆ ರಿಯಾಯ್ತಿ ನೀಡಿ, ಬಳಿಕ ಸೂಕ್ತ ಕಾನೂನು ತಿದ್ದುಪಡಿ ತರುವ ನಿಟ್ಟಿನಲ್ಲಿ ಇದು ಸಹಕಾರಿಯಾಗಲಿದೆ. ಅಂತೆಯೇ ವೈದ್ಯಕೀಯ ಸಾಧನಗಳ ನೀತಿ, ಇ- ಆರೋಗ್ಯ ಪ್ರಾಧಿಕಾರದಂಥ ಸುಧಾರಣಾ ಕ್ರಮಗಳು ಹಂತಹಂತವಾಗಿ ಜಾರಿಗೆ ಬರಲಿವೆ ಎಂದು ವಿವರಿಸಿದರು.

ವೈದ್ಯಕೀಯ ಶಿಕ್ಷಣ, ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಕಾರ್ಯಯೋಜನೆ ರೂಪಿಸಿ, ಕಾರ್ಯಾರಂಭ ಮಾಡಲಾಗಿದೆ. ರಾಜಕೀಯಕ್ಕಿಂತ ಇಲಾಖೆಯ ವಿಷಯಕ್ಕೆ ಹೆಚ್ಚಿನ ಗಮನ ಹರಿಸಲಾಗಿದೆ. 

ಇಡೀ ವಿಶ್ವವೇ ಸ್ಪರ್ಧೆಯ ಅಂಗಳವಾಗಿರುವ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದ ಸ್ಪರ್ಧಾತ್ಮಕತೆಯನ್ನು ಬೆಳೆಸಲು ಅಗತ್ಯ ಕಾರ್ಯಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. 

ಗುಣಮಟ್ಟದ ಬದುಕು, ಗುಣಮಟ್ಟದ ಸೌಲಭ್ಯದ ಕನಸಿಗೆ ಪೂರಕವಾಗಿ ಕಾರ್ಯ ನಿರ್ವಹಿಸಲಾಗುವುದು ಎಂದರು.

ವೈದ್ಯರ ಹಿತ ಕಾಪಾಡುವಲ್ಲಿ ಐಎಂಎ ಮುಂಚೂಣಿಯಲ್ಲಿದ್ದು, ನೀತಿ, ಕಾನೂನು, ಸಾಮಾಜಿಕ ಜವಾಬ್ದಾರಿ ವಿಚಾರದಲ್ಲಿ ದೇಶಾದ್ಯಂತ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನಾರ್ಹ. ವೈದ್ಯಕೀಯ ಶಿಕ್ಷಣ ಹಾಗೂ ವೈದ್ಯ ವೃತ್ತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಕಾಶಿ ಎನಿಸಿದೆ ಎಂದು ಬಣ್ಣಿಸಿದರು. ಐಎಂಎಯ ಸಮಾಜಮುಖಿ ಕಾರ್ಯಗಳಿಗೆ ಎಲ್ಲ ನೆರವು ನೀಡಲು ಸಿದ್ಧ ಎಂದರು.

ಜೀವನದ ತಿರುವು, ವ್ಯಕ್ತಿತ್ವ, ಗೌರವ, ಗುರುತಿಸುವಿಕೆ ಪಡೆದುಕೊಂಡದ್ದು ಮಂಗಳೂರಿನಿಂದ. ಇಲ್ಲಿನ ಸಜ್ಜನರು ಸಾಧಕರಿಂದ ಸ್ಫೂರ್ತಿ ದೊರಕಿದೆ ಎಂದು ನೆನಪಿಸಿಕೊಂಡರು.

ರಾಜ್ಯ ಐಎಂಎ ಅಧ್ಯಕ್ಷ ಡಾ.ಮಧುಸೂದನ ಕರಿಗನೂರು ಅಧ್ಯಕ್ಷತೆ ವಹಿಸಿದ್ದರು. ಐಎಂಎ ನೂತನ ಅಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್ ಮುಂದಿನ ಕಾರ್ಯಯೋಜನೆಯ ರೂಪುರೇಷೆ ವಿವರಿಸಿದರು. 

ಎಜೆ ವೈದ್ಯಕೀಯ ಕಾಲೇಜಿನ ಅಧ್ಯಕ್ಷ ಎ.ಜೆ.ಶೆಟ್ಟಿ, ನಿಟ್ಟೆ ವಿವಿ ಕುಲಪತಿ ಡಾ.ಸತೀಶ್ ಭಂಡಾರಿ, ಸುಳ್ಯ ಕೆವಿಜೆ ಮೆಡಿಕಲ್ ಕಾಲೇಜಿನ ವೈದ್ಯಕೀಯ ನಿರ್ದೇಶಕ ಡಾ.ಕೆ.ವಿ.ಚಿದಾನಂದ, ಯೆನಪೋಯ ಕಾಲೇಜಿನ ಸಹ ಕುಲಪತಿ ಡಾ.ರಘುವೀರ, ಮಣಿಪಾಲ ಕೆಎಂಸಿ ಸಹ ಕುಲಪತಿ ಡಾ.ಎಚ್.ಎಸ್.ಬಲ್ಲಾಳ್, ಕಣಚೂರು ವೈದ್ಯಕೀಯ ಕಾಲೇಜಿನ ಅಧ್ಯಕ್ಷ ಡಾ.ಯು.ಕೆ.ಮೋನು, ರಾಜ್ಯ ಐಎಂಎ ನಿಯೋಜಿತ ಅಧ್ಯಕ್ಷ ವೆಂಕಟಾಚಲಪತಿ ವಿಶೇಷ ಅತಿಥಿಗಳಾಗಿದ್ದರು.

ನೂತನ ಅಧ್ಯಕ್ಷ ಡಾ.ಎಂ.ಅಣ್ಣಯ್ಯ ಕುಲಾಲ್ ಉಳ್ತೂರು, ಕಾರ್ಯದರ್ಶಿ ಡಾ.ರಶ್ಮಿ ಕುಂದಾಪುರ, ಕೋಶಾಧ್ಯಕ್ಷ ಡಾ.ಜಿ.ಕೆ.ಭಟ್ ಸಂಕಬಿತ್ತಿಲು, ಹಿಂದಿನ ಸಾಲಿನ ಕಾರ್ಯದರ್ಶಿ ಡಾ.ಸುಧೀಂದ್ರ ರಾವ್, ಖಜಾಂಚಿ ವಿನಯ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ನಿಕಟಪೂರ್ವ ಅಧ್ಯಕ್ಷ ಡಾ.ಬಿ.ಸಚ್ಚಿದಾನಂದ ರೈ ಸ್ವಾಗತಿಸಿದರು. ಕೆ.ವಿ.ದೇವಾಡಿಗ ಐಎಂಎ ಇತಿಹಾಸ ಪರಿಚಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News