ಸೆಪ್ಟೆಂಬರ್‌ ವರೆಗೆ ಸಂಗ್ರಹವಾಗಿರುವ ತೆರಿಗೆ ಇಡೀ ವರ್ಷದ ಗುರಿಯ ಕೇವಲ ಶೇ.37ರಷ್ಟು !

Update: 2019-10-31 17:05 GMT

ಹೊಸದಿಲ್ಲಿ, ಅ.31: 2019-20ನೇ ಸಾಲಿನ ಪೂರ್ವಾರ್ಧದಲ್ಲಿ ಸಂಗ್ರಹವಾಗಿರುವ ತೆರಿಗೆಯ ಪ್ರಮಾಣವು ಮುಂಗಡಪತ್ರದಲ್ಲಿಯ ಪೂರ್ಣ ವರ್ಷದ ಗುರಿಯ ಕೇವಲ ಶೇ.36.8ರಷ್ಟಾಗಿದ್ದು, ಇದು 2014-15ರ ನಂತರದ ಕನಿಷ್ಠ ಮಟ್ಟವಾಗಿದೆ. ಆರ್ಥಿಕ ಮಂದಗತಿಯು ಸರಕಾರದ ಆದಾಯಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತಿದೆ ಎನ್ನುವುದನ್ನು ಇದು ಸೂಚಿಸುತ್ತಿದೆ.

2019-20ನೇ ಸಾಲಿಗೆ ತೆರಿಗೆ ಸಂಗ್ರಹದ ಗುರಿ 16.49 ಲ.ಕೋ.ರೂ. ಆಗಿದ್ದರೆ, ಸೆ.30ಕ್ಕೆ ಕೊನೆಗೊಂಡ ಆರು ತಿಂಗಳ ಅವಧಿಯಲ್ಲಿ ಒಟ್ಟು ನಿವ್ವಳ ತೆರಿಗೆ ಸಂಗ್ರಹವು ಕೇವಲ 6.07 ಲ.ಕೋ.ರೂ.ಆಗಿದೆ ಎನ್ನುವುದನ್ನು ಮಹಾ ಲೇಖಾ ನಿಯಂತ್ರಕ (ಸಿಜಿಎ)ರ ಕಚೇರಿಯು ಗುರುವಾರ ಬಿಡುಗಡೆಗೊಳಿಸಿರುವ ಅಂಕಿಅಂಶಗಳು ತೋರಿಸಿವೆ.

ಹಾಲಿ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ.3.3ಕ್ಕೆ ನಿಯಂತ್ರಿಸುವಲ್ಲಿ ಮೋದಿ ಸರಕಾರವು ಗಂಭೀರ ಸವಾಲನ್ನು ಎದುರಿಸಬಹುದು ಎನ್ನುವುದನ್ನು ತೆರಿಗೆ ಸಂಗ್ರಹದಲ್ಲಿಯ ಮಂದಗತಿಯು ಸಂಕೇತಿಸುತ್ತಿದೆ.

ನೇರ ಮತ್ತು ಪರೋಕ್ಷ ತೆರಿಗೆ ಸಂಗ್ರಹ ಎರಡೂ ನಿಗದಿತ ಗುರಿಗಳಿಗಿಂತ ತೀರ ಕಡಿಮೆಯಾಗಿವೆ ಎನ್ನುವುದನ್ನು ಅಂಕಿಅಂಶಗಳು ತೋರಿಸಿವೆ.

ಇದೇ ಅವಧಿಯಲ್ಲಿ ತೆರಿಗೆಯೇತರ ಆದಾಯಗಳು ಮುಂಗಡಪತ್ರ ಗುರಿಯ ಶೇ.66.67ರಷ್ಟಾಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ ಇದು ಶೇ.44.5ರಷ್ಟಾಗಿತ್ತು. ಪೂರ್ಣ ವರ್ಷಕ್ಕೆ 1.63 ಲ.ಕೋ.ರೂ.ಗಳ ಗುರಿಯನ್ನು ಹೊಂದಲಾಗಿದ್ದರೆ, ಡಿವಿಡೆಂಡ್‌ಗಳು ಮತ್ತು ಲಾಭಗಳ ರೂಪದಲ್ಲಿ 1.55 ಲ.ಕೋ.ರೂ.ಗಳು ಸರಕಾರಕ್ಕೆ ಈಗಾಗಲೇ ಸಂದಾಯವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News