ಸಕಾರಾತ್ಮಕ ಮನೋಭಾವವೇ ಯಶಸ್ವಿನ ಗುಟ್ಟು: ಪ್ರೊ. ಉದಯಕುಮಾರ್
ಉಪ್ಪಿನಂಗಡಿ: ವೃತ್ತಿ ಮತ್ತು ಪ್ರವೃತ್ತಿಗಳಲ್ಲಿಯ ಯಶಸ್ಸನ್ನು ವ್ಯಕ್ತಿಗಳ ಮನೋಭಾವ ನಿರ್ಧರಿಸುತ್ತದೆ. ಸಕಾರಾತ್ಮಕ ಮನೋಭಾವವೇ ಯಶಸ್ವಿ ವ್ಯಕ್ತಿಗಳ ಗುಟ್ಟು ಎಂದು ಕೆಎಸ್‍ಎಸ್ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ಉದಯಕುಮಾರ್ ಕೆ. ಅಭಿಪ್ರಾಯಿಸಿದರು.
ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವತಿಯಿಂದ ನಡೆದ ಮೆನೇಜ್‍ಮೆಂಟ್ ಫೆಸ್ಟ್ 'ಚೆಕ್‍ಮೇಟ್- 2019'ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕೌಶಲ್ಯ ಮತ್ತು ಜ್ಞಾನಧಾರಿತ ಶಿಕ್ಷಣದೊಂದಿಗೆ ವೃತ್ತಿಗೆ ಬೇಕಾದ ಬೌದ್ಧಿಕ ಮತ್ತು ಭೌತಿಕ ಸಂಪನ್ಮೂಲಗಳನ್ನು ಕ್ರೂಢೀಕರಿಸುವಲ್ಲಿ ಸಕಾರಾತ್ಮಕವಾಗಿ ಬಾಹ್ಯ ಜಗತ್ತಿನೊಂದಿಗೆ ಸ್ಪಂದಿಸಬೇಕಾದ ಅನಿವಾರ್ಯತೆ ಇದೆ. ಶೈಕ್ಷಣಿಕ ಜ್ಞಾನರ್ಜನೆಯ ವೇಳೆಯಲ್ಲಿ ಕೌಶಲವನ್ನು ವೃದ್ಧಿಗೊಳಿಸುವ ಪ್ರಾಯೋಗಿಕ ಅನುಭವವನ್ನು ನೀಡುವ ಇಂತಹ ಮೆನೇಜ್‍ಮೆಂಟ್ ಫೆಸ್ಟ್ ಗಳು ಅನುಸ್ಮರಣೀಯವಾದುದು ಎಂದರು.
ಕಾಲೇಜಿನ ಪ್ರಾಂಶುಪಾಲ ಸುಬ್ಬಪ್ಪ ಕೈಕಂಬ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮ ಸಂಯೋಜಕಿ ಶ್ರೀಮತಿ ಬಸವರಾಜೇಶ್ವರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಭಾಗ ಮುಖ್ಯಸ್ಥ ಅಹ್ಮದ್ ಎಸ್.ಎಂ.ಮಾತನಾಡಿ ಶುಭ ಹಾರೈಸಿದರು.
ದ್ವಿತೀಯ ಎಂ.ಕಾಂ. ವಿದ್ಯಾರ್ಥಿನಿ ಕು. ಲೋಲಾಕ್ಷಿ ಸ್ವಾಗತಿಸಿದರು. ಕು. ವಿಧಾತ್ ವಂದಿಸಿದರು. ಕು. ಸ್ವಾತಿ ಎ. ಕಾರ್ಯಕ್ರಮ ನಿರೂಪಿಸಿದರು.