ನ.5, 6ರಂದು ಮಾಣಿ ಬಾಲವಿಕಾಸದಲ್ಲಿ ಪ್ರತಿಭಾ ಕಾರಂಜಿ

Update: 2019-10-31 17:57 GMT

ಬಂಟ್ವಾಳ, ಅ. 31: ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ಆತಿಥ್ಯ ದಲ್ಲಿ ನಡೆಯುತ್ತಿರುವುದು, ನಮಗೂ ಅಭಿಮಾನದ ಸಂಗತಿ. ಎಲ್ಲ ಪ್ರತಿಭೆಗಳ ಅನಾವರಣ ಹಾಗೂ ತೀರ್ಪಿನಲ್ಲಿ ಪಾರದರ್ಶಕತೆ ಯೊಂದಿಗೆ ಈ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದು ಜಿಪಂ ಸದಸ್ಯೆ ಮಂಜುಳಾ ಮಾವೆ ಹೇಳಿದ್ದಾರೆ.

ನ.5 ಮತ್ತು 6 ರಂದು ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ-ಕಲೋತ್ಸವದ ಅಂಗವಾಗಿ ಗುರುವಾರ ನಡೆದ ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಾಲಾ ಸಂಚಾಲಕ ಜೆ.ಪ್ರಹ್ಲಾದ ಶೆಟ್ಟಿ ಮಾತನಾಡಿ, ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸುವ ಎಲ್ಲಾ ಪ್ರತಿಭೆಗಳನ್ನು ಗೌರವಿಸುವ ಅವಕಾಶ ನಮ್ಮ ಪಾಲಿಗೆ ಒದಗಿದೆ, ಇದು ಕೇವಲ ಇಲಾಖೆಯ ಕಾರ್ಯಕ್ರಮ ಅಲ್ಲ, ನಮ್ಮ ಮನೆಯ ಕಾರ್ಯಕ್ರಮ ಎಂದು ಭಾವಿಸಿ, ಯಶಸ್ಸುಗೊಳಿಸುವ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಮಾತನಾಡಿ, ಯಾವುದೇ ಗೊಂದಲಗಳಿಲ್ಲದೆ ಸ್ಪರ್ಧಾಕಾರ್ಯಕ್ರಮ ನಡೆಸುವ ನಿಟ್ಟಿನಲ್ಲಿ ಅನುಭವಿ ತೀರ್ಪುಗಾರರ ಆಯ್ಕೆಗೆ ಸೂಚನೆ ನೀಡಿದರು. ಮೊದಲ ದಿನ ಪ್ರೌಢಶಾಲಾ ವಿಭಾಗದ  ಸ್ಪರ್ಧೆಗಳು ನಡೆಯಲಿದ್ದು, ಎರಡನೇ ದಿನ ಪ್ರಾಥಮಿಕ ವಿಭಾಗದ ಸ್ಪರ್ಧೆಗಳು ನಡೆಯಲಿದೆ. ಎಲ್ಲ ಸ್ಪರ್ಧಿಗಳು ಆಯಾ ದಿನದಂದು ಬೆಳಿಗ್ಗೆ 10 ಗಂಟೆಯ ಮುಂಚಿತವಾಗಿ ನೋಂದಣಿ ಮಾಡಿಕೊಳ್ಳಬೇಕು, ವೈಯುಕ್ತಿಕ ವಿಭಾಗದ ಸ್ಪರ್ಧೆಗಳ ಪೈಕಿ ಭರತನಾಟ್ಯ ಹಾಗೂ ಯಕ್ಷಗಾನಕ್ಕೆ ಸಿಡಿ ಬಳಸಬಹುದು ಎನ್ನುವ ಕುರಿತು ತೀರ್ಮಾನಿಸಲಾಯಿತು.

ಎಲ್ಲ ಸ್ಪರ್ಧೆಗಳ ನಿಯಮಗಳ ಬಗ್ಗೆ ತೀರ್ಪುಗಾರರಿಗೆ ಮಾಹಿತಿ ನೀಡುವುದು, ತೀರ್ಪುಗಾರರ ಸಮ್ಮುಖದಲ್ಲೇ ತೀರ್ಪು ಅಂತಿಮ ಗೊಳಿಸಿ ಪ್ರಕಟಿಸುವುದು ಮೊದಲಾದ ವಿಚಾರದ ಬಗ್ಗೆ ಚರ್ಚೆ ನಡೆಯಿತು. ಜಿಲ್ಲಾ ನೋಡಲ್ ಅಧಿಕಾರಿ ಶೋಭಾ ಪ್ರಾಸ್ತಾವಿಕ ವಾಗಿ ಮಾತನಾಡಿ, ಯಾವುದೇ ಗೊಂದಲಗಳಿಲ್ಲದೆ ಸಂಭ್ರಮದಿಂದ. ಪ್ರತಿಭಾಕಾರಂಜಿ ನಡೆಯಬೇಕು, ಈ ಕುರಿತು ತಾಲೂಕು ನೋಡಲ್ ಅಧಿಕಾರಿಗಳು ಮುತುವರ್ಜಿ ವಹಿಸುವಂತೆ ಮನವಿ ಮಾಡಿದರು. ತಾಲೂಕು ಶಿಕ್ಷಣ ಸಂಯೋಜಕಿ ಸುಶೀಲಾ, ನೋಡಲ್ ಅಧಿಕಾರಿ ಅಬೂಬಕರ್ ಅಶ್ರಫ್, ತಾಲೂಕು ಶಿಕ್ಷಣ ಸಮನ್ವಯಾಧಿಕಾರಿ ರಾಧಾಕೃಷ್ಣ ಭಟ್ ಸ್ಪರ್ಧಾ ಕಾರ್ಯಕ್ರಮಗಳ ತಯಾರಿ ಕುರಿತು ಮಾಹಿತಿ ನೀಡಿದರು.

ವಿವಿಧ ತಾಲೂಕುಗಳ ನೋಡಲ್ ಅಧಿಕಾರಿಗಳಾದ ಡಾ.ಸುಂದರ್ ಕೇನಾಜೆ, ಸುಂದರ ಗೌಡ, ಜೋಯಲ್ ಲೋಬೋ, ಶಿವಾನಂದ ಕಾಯ್ಕಿಣಿ,  ವಿಶ್ವನಾಥ, ಬಿ.ಕೆ.ಭಂಡಾರಿ, ಚಂದ್ರಹಾಸ, ಚನ್ನಕೇಶವ, ಮುರಳೀಕೃಷ್ಣ, ಶಿವಪ್ರಸಾದ್ ಶೆಟ್ಟಿ, ಪ್ರವೀಣ ಬಿ. ಪುಷ್ಪಾ.ಎಂ.ಕೆ, ಶುಭ, ಜ್ಯೋತಿ, ನೋಣಯ್ಯ ನಾಯ್ಕ್, ಬಾಲವಿಕಾಸ ಶಾಲೆಯ  ಆಡಳಿತಾಧಿಕಾರಿ ಸಿ.ಶ್ರೀಧರ್, ಪ್ರೌಢಶಾಲಾ ಮುಖ್ಯಶಿಕ್ಷಕಿ ವಿಜಯಲಕ್ಷ್ಮಿ ವಿ.ಶೆಟ್ಟಿ, ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಗ್ರೇಸ್ ಪಿ ಸಲ್ಡಾನ ಮೊದಲಾದವರು ಉಪಸ್ಥಿತರಿದ್ದು, ಸಲಹೆ ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News